ತುಮಕೂರು: ಗ್ರಾಹಕರ ಎಟಿಎಂ ಕಾರ್ಡ್ ಡೇಟಾವನ್ನು ಸ್ಕಿಮ್ಮಿಂಗ್ ಡಿವೈಸ್‌ಗಳಲ್ಲಿ ಸಂಗ್ರಹಿಸಿಕೊOಡು ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿ ಹಣ ವಿತ್‌ಡ್ರಾ ಮಾಡಿದ್ದ ಇಬ್ಬರು ವಿದೇಶಿ ಪ್ರಜೆಗಳಿಗೆ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8ವರ್ಷ ಜೈಲು ಶಿಕ್ಷೆ ಹಾಗೂ ವಿವಿಧ ಕಲಂಗಳ ಅಡಿಯಲ್ಲಿ ಒಟ್ಟು 4.25 ಲಕ್ಷ ರೂ. ದಂಡ ವಿಧಿಸಿದೆ.
ಉಗಾಂಡ ದೇಶದವನಾದ ಇವಾನ್ ಕಾಂಬೋ ಮತ್ತು ಕೀನ್ಯಾ ದೇಶದ ಲಾರೆನ್ಸ್ ಮಕಾಮು ಇಬ್ಬರು ದೆಹಲಿಯಲ್ಲಿ ವಾಸಿಸುತ್ತಿದ್ದರು. 2020 ಅಕ್ಟೋಬರ್ .31 ರಂದು ತುಮಕೂರು ನಗರದ ಭೀಮಸಂದ್ರ ಬಳಿ ಇರುವ ಇಂಡಿಯಾ ಒನ್ ಎಟಿಎಂ ಕೌಂಟರ್‌ನಲ್ಲಿ ಹಸಿರು ಬಣ್ಣದ ಎಟಿಎಂಗೆ ಅಳವಡಿಸಬಹುದಾದ ಸ್ಕಿಮ್ಮಿಂಗ್ ಕಾರ್ಡ್ ರೀಡರ್ ಅದರೊಳಗೆ ಸಣ್ಣ ಬ್ಯಾಟರಿ ಇದರೊಳಗೆ ನ್ಯಾನೋ ಕಾರ್ಡ್ ಮತ್ತು ಒಂದು ಸರ್ಕ್ಯೂಟ್ ಬೋರ್ಡ್ನಲ್ಲಿ 16 ಜಿಬಿಯ ಸ್ಯಾನ್ ಡಿಸ್ಕ್ ಮೆಮೋರಿ ಕಾರ್ಡ್ ಡಿವೈಸ್‌ಗಳನ್ನು ಅಳವಡಿಸಿದ್ದರು. ಮೇಲ್ಕಂಡ ಎಟಿಎಂನಲ್ಲಿ ವ್ಯವಹರಿಸಿದ ಗ್ರಾಹಕರ ಎಟಿಎಂ ಕಾರ್ಡ್ಗಳನ್ನು ಆರೋಪಿಗಳು ಸ್ಕೀಮಿಂಗ್ ಡಿವೈಸ್‌ಗಳಲ್ಲಿ ಸಂಗ್ರಹಿಸಿಕೊOಡು ನಕಲಿ ಎಟಿಎಂ ಕಾರ್ಡ್ಗಳನ್ನು ಸೃಷ್ಟಿಸಿದ್ದರು.
ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ತಿಲಕ್ ರಾಮು ಎಂಬುವರ ಸಿಂಡಿಕೇಟ್ ಬ್ಯಾಂಕ್ ಖಾತೆಯಲ್ಲಿದ್ದ 25೦೦೦ ಹಣವನ್ನು ಹಂತ ಹಂತವಾಗಿ 3 ಬಾರಿ 2020ರ ನವೆಂಬರ್ 1 ರಂದು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಡಿಪಾರ್ಟ್ಮೆಂಟ್ ಆಫ್ ಎಟಿಎಂನಿOದ ಹಣವನ್ನು ವಿತ್ ಡ್ರಾ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ಸಿಇಎನ್ ಪೊಲೀಸರು ತನಿಖೆ ಕೈಗೊಂಡಾಗ ಮೇಲ್ಕಂಡ ವ್ಯಕ್ತಿಗಳ ಜಾಡು ಸಿಕ್ಕಿತು. ವಿಚಾರಣೆ ನಡೆಸಿದಾಗ ಅರೋಪಿಗಳು ವಿದೇಶದವರು ಎಂದು ಗೊತ್ತಾಗಿದ್ದು, ಅವರ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯೂ ಮಾನ್ಯತೆ ಇಲ್ಲದಿರುವುದು ತಿಳಿದು ಬಂದಿತು. ಪ್ರಕರಣ ತನಿಖೆ ಪೂರೈಸಿ ಅಂದಿನ ಪೊಲಿಸ್ ಇನ್ಸೆಪಕ್ಟರ್ ಎಂ.ವಿ. ಶೇಷಾದ್ರಿ ಅವರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದರು. ಪೊಲಿಸ್ ಪೇದೆ ರಮೇಶ್ ಅವರು ಸಾಕ್ಷಿಯಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಸಹಕರಿಸಿದ್ದರು.
ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್. ಅನಂತ್ ಅವರು ಆರೋಪಿಗಳಿಗೆ ಐಪಿಸಿ ಹಾಗೂ ಇತರೆ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 8 ವರ್ಷ ಜೈಲು ಹಾಗೂ 4.25 ಲಕ್ಷ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕರಾದ ವಿ.ಎ. ಕವಿತ ವಾದಿಸಿದ್ದರು.