ತುಮಕೂರು || ಅನಿವಾಸಿ ಭಾರತೀಯನ ಮೃತದೇಹ ತರಲು ಸರ್ಕಾರದ ಆರ್ಥಿಕ ನೆರವು

Vidhanasoudha, Bangalore, Karnataka

ತುಮಕೂರು: ಗಯಾನದಲ್ಲಿ ಮೃತಪಟ್ಟ ಅನಿವಾಸಿ ಭಾರತೀಯ ಪಿ.ಬಿ. ಗಿರೀಶ ಬಾಬು ಪಾಲೆ ಅವರ ಮೃತ ದೇಹವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಎಚ್.ಎಸ್. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಜ್ಯದ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಮದೆನಾಡು ಗ್ರಾಮದ ನಿವಾಸಿಯಾಗಿದ್ದ ಮೃತ ಪಿ.ಬಿ. ಗಿರೀಶ ಬಾಬು ಪಾಲೆ ಅವರು ದಕ್ಷಿಣ ಅಮೆರಿಕಾದ ಗಯಾನಾ ದೇಶದ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಬಹು ಅನಿಯಮಿತ ರಕ್ತಸ್ರಾವದ ಹೃದಯಾಘಾತದಿಂದ ಜುಲೈ ೧೪ರಂದು ಮೃತಪಟ್ಟಿದ್ದು, ಕಳೆದ ೨ ವರ್ಷಗಳಿಂದ ಗಯಾನಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಿರೀಶ ಬಾಬು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಪ್ರಯತ್ನಗಳು ಪ್ರಾರಂಭವಾಗಿದ್ದು, ಅದಕ್ಕಾಗಿ ಸುಮಾರು ೧೨ ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಮೃತರ ಪತ್ನಿ ಜಾನಕಿ ಕೆ.ಎನ್ ಅವರು ೨ ವರ್ಷದ ಮಗನೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯರಾಗಿರುವ ಕಾರಣದಿಂದ ಸರ್ಕಾರದ ಸಹಾಯಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯವನ್ನು ತಂದಿರುತ್ತಾರೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮೃತದೇಹವನ್ನು ಭಾರತಕ್ಕೆ ತರಲು  ಕರ್ನಾಟಕ ಸರ್ಕಾರದಿಂದ ೩,೬೦,೦೦೦ ರೂ.ಗಳನ್ನು ಸಹಾಯ ಧನವಾಗಿ  ಮಂಜೂರು ಮಾಡಿರುತ್ತಾರೆ.

ಮೃತರು ಸೇವೆ ಸಲ್ಲಿಸುತ್ತಿದ್ದ ಶೆರಿಫ್ ಜನರಲ್ ಆಸ್ಪತ್ರೆಯು ಉಳಿದ ಮೊತ್ತವನ್ನು ಭರಿಸಲು ಒಪ್ಪಿಗೆ ನೀಡಿದೆ. ಗಯಾನಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ನವದೆಹಲಿಯ ನಿವಾಸಿ ಆಯುಕ್ತರ ಸಹಕಾರದಿಂದ ಮೃತದೇಹವನ್ನು ಶೀಘ್ರದಲ್ಲೇ ಭಾರತಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *