ತುಮಕೂರು : ತುಮಕೂರಿನಲ್ಲಿ ಪತ್ತೆಯಾಯ್ತು ಹೊಯ್ಸಳರ ಕಾಲದ ಶಾಸನ

ತುಮಕೂರು : ತುಮಕೂರಿನಲ್ಲಿ ಪತ್ತೆಯಾಯ್ತು ಹೊಯ್ಸಳರ ಕಾಲದ ಶಾಸನ

ಮಂಜುನಾಥ್ ಎಚ್ ಆರ್, ಹಿಂಡಿಸಿಗೆರೆ

ತುಮಕೂರು : ತುಮಕೂರು ಜಿಲ್ಲೆ ಸಾಕಷ್ಟು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ, ಪೌರಾಣಿಕ ನೆಲೆಗಟ್ಟನ್ನು ಹೊಂದಿರುವ ಶ್ರೀಮಂತ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವತಂಹ ಜಿಲ್ಲೆ. ಇಂತಹ ತುಮಕೂರು ಜಿಲ್ಲೆಯನ್ನು ಬನರು, ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ಹೊಯ್ಸಳರು ಹೀಗೆ ಅನೇಕ ರಾಜ ಮನೆತನಗಳು ಆಳಿ ಅಳಿದು ಹೋಗಿವೆ. ಇವರು ನಾವು ಆಡಳಿತ ಮಾಡಿದ್ದೆವು ಎನ್ನುವುದಕ್ಕೆ ಅನೇಕ ಕುರುಹುಗಳನ್ನು ಕೂಡ ಬಿಟ್ಟು ಹೋಗಿದ್ದಾರೆ. ಅಂತಹ ಕುರುಹುಗಳಲ್ಲಿ ಇದೀಗ ಮಹತ್ವದ ದಾಖಲೆಯೊಂದು ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. 

ರಾಜ ಮಹಾರಾಜರು ಆಳ್ವಿಕೆ ಮಾಡಿ ಯುದ್ಧ ಮಾಡಿ ನಶಿಸಿಹೋಗುವ ಮುನ್ನ ಇದಕ್ಕೆ ಸಂಬಂಧಪಟ್ಟಂತಹ ವೀರ ಕಲ್ಲುಗಳ ಸ್ಥಾಪನೆ ಮತ್ತು ಶಾಸನಗಳನ್ನು ನಿರ್ಮಾಣ ಮಾಡುವಂಥದ್ದು ವಾಡಿಕೆ. ಅದೇ ರೀತಿಯಾಗಿ ಇದೀಗ ತುಮಕೂರು ಜಿಲ್ಲೆಯ ಗೂಳೆಹರವೇ ಗ್ರಾಮದಲ್ಲಿ ಇರುವಂತಹ ಶ್ರೀರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಶಾಸನವೊಂದು ಪತ್ತೆಯಾಗಿದ್ದು ಇದರಲ್ಲಿ ಹೊಯ್ಸಳರಿಗೆ ಸಂಬಂಧಪಟ್ಟಂತಹ ಅನೇಕ ವಿಚಾರಗಳು ಮುನ್ನೆಲೆಗೆ ಬಂದಿದೆ.

ಕರ್ನಾಟಕವನ್ನು ಆಳಿದ ಅತ್ಯಂತ ಶ್ರೀಮಂತ ಮನೆತನಗಳಲ್ಲಿ ಹೊಯ್ಸಳ ರಾಜ ಮನೆತನವು ಕೂಡ ಒಂದು. ಇದಕ್ಕೆ ಸಂಬಂಧಪಟ್ಟಂತಹ ಹಲವಾರು ಶಾಸನಗಳ ಮತ್ತು ವೀರಕಲ್ಲುಗಳು ರಾಜ್ಯದ ಹಲವಾರು ಮೂಲೆ ಮೂಲೆಗಳಲ್ಲೂ ಕೂಡ ಸಿಗುತ್ತವೆ. ಅದೇ ರೀತಿಯಾಗಿ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಗೂಳೇಹರವಿ ಗ್ರಾಮದಲ್ಲೂ ಕೂಡ ಸಿಕ್ಕಿದೆ. ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವಾಗ. ಇದನ್ನು ದೇವರು ಚಾವಣಿಯಲ್ಲಿ ಈ ಹಿಂದಿನ ತಲೆಮಾರಿನ ಭಕ್ತರು ಬಳಕೆ ಮಾಡಿದ್ದರು. ಇತ್ತೀಚೆಗೆ ದೇವಸ್ಥಾನ ಜೀರ್ಣೋದ್ಧಾರ ಮಾಡುವಾಗ ಇದನ್ನು ಕೆಳಗೆ ಇಳಿಸಿದ್ದರು. ಇದರ ಮೇಲಿರುವಂತಹ ಲಿಪಿಗಳನ್ನು ಗಮನಿಸಿದ ಸ್ಥಳೀಯರು ಯಾವುದೋ ಶಾಸನ ಇರಬಹುದು ಎಂದು ದೇವಸ್ಥಾನದ ಮೂಲೆಯೊಂದರಲ್ಲಿ ಇರಿಸಿ ಬಿಟ್ಟಿದ್ದರು. ಆದರೆ ಇದು ಯಾವ ಶಾಸನ..? ಯಾರಿಗೆ ಸೇರಿದ್ದು..? ಇದರಲ್ಲಿ ಇರುವಂತಹ ವಿಚಾರ ಏನು ಎನ್ನುವುದು ಇಲ್ಲಿಯವರೆಗೂ ಪತ್ತೆ ಮಾಡುವಂತಹ ಪ್ರಯತ್ನವನ್ನು ಯಾವುದೇ ಇತಿಹಾಸಕಾರರು ಮಾಡಿರಲಿಲ್ಲ.

ಸ್ಥಳೀಯರು ಮತ್ತು ಗೂಳೇಹರವಿ ಉತ್ಸಾಹಿ ಯುವಕರಾದ ಮಧುಸೂದನ್ ಅವರು ಸಾಕಷ್ಟು ಇತಿಹಾಸಕಾರರನ್ನು ಕೂಡ ಸಂಪರ್ಕ ಮಾಡಿದ್ದರು. ಇದರಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಬೇಕು, ನಮ್ಮ ಊರಿನ ಇತಿಹಾಸವನ್ನು ಪಡೆದುಕೊಳ್ಳಬೇಕು ಎಂದು ಪ್ರಯತ್ನಪಟ್ಟಿದ್ದರು ಆದರೆ ಯಾವುದೂ ಕೂಡ ಪ್ರಯೋಜನ ಆಗಿರಲಿಲ್ಲ. ಇದೀಗ ಅಂತಿಮವಾಗಿ ಇತಿಹಾಸ ಸಂಶೋಧಕ ಮಧುಸೂದನ್ ಕೆ ಆರ್ ಅವರು ಗೂಳೇಹರವಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಇದ್ದ ಈ ಅಪ್ರಕಟಿತ ಶಾಸನವನ್ನು ಓದುವುದರ ಮೂಲಕ ಅದರಲ್ಲಿರುವ ಮಾಹಿತಿಯನ್ನು ರಾಜ್ಯದ ಜನತೆಯ ಮುಂದೆ ಇಟ್ಟಿದ್ದಾರೆ.

ಈ ಶಾಸನದ ಪ್ರಕಾರ ಹೊಯ್ಸಳರ 3ನೇ ವೀರ ಬಲ್ಲಾಳನ ಕ್ರಿ.ಶ. 1337 ರ ಕಾಲದ ಶಿಲಾಶಾಸನ ಎನ್ನಲಾಗಿದೆ. ಇದರಲ್ಲಿ ‘ಗಂಡರಗೂಳಿನಾಯಕನ ವಂಶಸ್ಥರು ಗ್ರಾಮದಲ್ಲಿ ಮಲಿದೇವರ’ ಅಂದರೆ ಒಂದು ಶಿವನ ದೇಗುಲದಕ್ಕೆ ದಾನ ನೀಡಿರುವ ಬಗ್ಗೆ ದಾಖಲಿಸಲಾಗಿದೆ.

ಶಾಸನದ ಪಾಠ

1.         ಸ್ವಸ್ತಿ ಶ್ರೀ ಜಯಾಭ್ಯದಯ

2.         ಯ ಶ ಶಕವರುಷ

3.         (125)8ನೆಯ ಧಾತು ಸಂವತ್ಸರ ಮಾ

4.         ಘ ಸುದ್ಧ ಪಂಚಮಿ ಮಂಗಳವಾರ ಶ್ರೀ ವಿಷ್ಣು

5.         ವರ್ದನ.. ವಲ್ಲಭ ಚಕ್ರವರ್ತಿ ಹೊಯಿಸಣಾ

6.         ಶ್ರೀವೀರಬಲ್ಲಾಳ ದೇವಸರ ಮಾದರ ಗೌಡ್ರಯ

7.         ವರ ಬಿರಗಾವಡಿ.ಗು ಗಂಡರಗೂಳಿ

ಇನ್ನು ಈ ಶಾಸನವನ್ನು ಓದಲು ಡಾ. ಆರ್. ಯುವರಾಜ, ಪವನ್ ಮೌರ್ಯ ಚಕ್ರವರ್ತಿ ಅವರು ಕೂಡ ಇತಿಹಾಸ ಸಂಶೋಧಕ ಮಧುಸೂದನ್ ಅವರಿಗೆ ಸಾತ್ ನೀಡಿದ್ದರು. ಸಾಕಷ್ಟು ರಾಜ ಮಹಾರಾಜರ ಆಳ್ವಿಕೆ ಮತ್ತು ಪ್ರಗತಿಯ ಸಂಕೇತವಾಗಿರುವ ತುಮಕೂರು ಜಿಲ್ಲೆಯಲ್ಲಿ ಹಲವಾರು ಶಾಸನಗಳು ಸಿಕ್ಕಿವೆ. ಇವುಗಳು ತುಮಕೂರು ಇತಿಹಾಸದ ಬಗ್ಗೆ ಸಾರಿ ಸಾರಿ ಹೇಳಿವೆ. ಇದೀಗ ಈ ಶಾಸನಗಳ ಸಾಲಿಗೆ ಮತ್ತೊಂದು ಶಾಸನ ಸೇರ್ಪಡೆಯಾಗಿದೆ.

ದೇವಾಲಯದ ಆವರಣದಲ್ಲಿ ಅಪ್ರಕಟಿತ ಶೀಲಾ ಶಾಸನ ಮಾತ್ರವಲ್ಲ, ಗಂಗ ನೊಳಂಬ ಶೈಲಿಯಲ್ಲಿರುವ ತುರುಗೋಲು ವೀರಗಲ್ಲು ಇದ್ದು, ಬೇರೊಂದು ಪ್ರಾಂತ್ಯದಿಂದ ಕಳ್ಳರು ಈ ಗ್ರಾಮಕ್ಕೆ ದಾಳಿ ಇಟ್ಟು ಹಸುಗಳನ್ನು ಕಳ್ಳತನ ಮಾಡಲು ಯತ್ನಿಸಿದಾಗ ಹಸುಗಳನ್ನು ರಕ್ಷಣೆ ಮಾಡುವ ಹೋರಾಟದಲ್ಲಿ ವೀರ ಮರಣನ್ನು ಹೊಂದಿದ ವೀರನ ನೆನಪಿಗಾಗಿ ಹಾಕಿರುವ ವೀರಗಲ್ಲುಗಳು. ಈ ಶಿಲ್ಪದ ಶೈಲಿಯ ಆಧಾರದ ಮೇಲೆ ಸುಮಾರು 1200 ವರ್ಷಗಳ ಹಳೆಯದು ಸುಮಾರು 9 10ನೇ ಶತಮಾನದ ಕಾಲಮಾನ ಸೇರುವ ವೀರಗಲ್ಲು ಎನ್ನಲಾಗಿದೆ

ಇನ್ನು ಈ ಅಪ್ರಕಟಿತ ಶಿಲಾ ಶಾಸನವನ್ನು ಅಕ್ಟೋಬರ್ 9 ರಂದು ನಡೆದ ಕರ್ನಾಟಕ ಇತಿಹಾಸ ಅಕಾಡೆಮಿ ವಾರ್ಷಿಕ ಸಮ್ಮೇಳನದಲ್ಲಿ ಇತಿಹಾಸ ಸಂಶೋಧಕ ಮಧುಸೂದನ್ ಕೆ ಆರ್ ಅವರು ಪ್ರಕಟ ಮಾಡಿದ್ದಾರೆ.

ಇನ್ನು ಈ ಶಾಸನದ ವಿಚಾರವನ್ನು ತಿಳಿದ ಗೂಳೇಹರವಿ ಗ್ರಾಮಸ್ಥರು ಸಂತಸವನ್ನ ವ್ಯಕ್ತಪಡಿಸಿದ್ದಾರೆ. ನಮ್ಮ ಗ್ರಾಮವು ಕೂಡ ಸಾಕಷ್ಟು ಇತಿಹಾಸ, ಹಿನ್ನೆಲೆ ಹೊಂದಿದ್ದು. ಹೊಯ್ಸಳರು ಆಳ್ವಿಕೆ ಮಾಡಿದ ಪುರಾಣಗಳು ಸಿಕ್ಕಿದೆ. ಎಂದು ಖುಷಿ ಪಟ್ಟಿದ್ದಾರೆ.

Leave a Reply

Your email address will not be published. Required fields are marked *