ತುಮಕೂರು || ಜಾತಿ ಗಣತಿ ವರದಿ ಜಾರಿ ಸರಿಯಲ್ಲ:  ಶ್ರೀ ಸಿದ್ಧಲಿಂಗ ಸ್ವಾಮೀಜಿ

ತುಮಕೂರು || ಜಾತಿ ಗಣತಿ ವರದಿ ಜಾರಿ ಸರಿಯಲ್ಲ:  ಶ್ರೀ ಸಿದ್ಧಲಿಂಗ ಸ್ವಾಮೀಜಿ

ತುಮಕೂರು:- ಹತ್ತು ವರ್ಷದ ಹಿಂದಿನ ಜಾತಿ ಗಣತಿ ವರದಿಯನ್ನು ಜಾರಿ ಮಾಡುವುದು ನ್ಯಾಯೋಚಿತವಲ್ಲ ಎಂದು ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ನಮ್ಮ ರಾಜ್ಯದಲ್ಲಿ ಸರ್ಕಾರ ಸಮಿತಿ ರಚನೆ ಮಾಡಿ ಜಾತಿ ಗಣನೆ ಮಾಡಿ ಅದರ ಆಧಾರದ ಮೇಲೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಯನ್ನು ತಿಳಿದುಕೊಂಡು ಆಯಾ ವರ್ಗಗಳಿಗೆ  ನ್ಯಾಯ ಒದಗಿಸಬೇಕು ಅನ್ನುವಂತಹದ್ದು ಅತ್ಯಂತ ಶ್ಲಾಘನೀಯವಾದ ಕಾರ್ಯ. ಆದರೆ, ಹತ್ತು ವರ್ಷದ  ಜಾತಿ ಗಣತಿ ವರದಿ  ಈಗ ಜಾರಿ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

ಈಗಿನ ಜಾತಿ ಗಣತಿ ವಿಚಾರವಾಗಿ ಬಹುತೇಕ ಎಲ್ಲರೂ ನಮಗೆ ಈ ಬಗ್ಗೆ ಗೊತ್ತಿಲ್ಲ. ವಿಚಾರ ಮಾಡಿಲ್ಲ. ನಮ್ಮ ಮನೆಗೆ ಬಂದಿಲ್ಲ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಹೀಗಾಗಿ ಈ ಜಾತಿ ಗಣತಿ ಮಾಡಿರುವುದು ಎಲ್ಲರ ಗಮನಕ್ಕೆ ಬಂದಿಲ್ಲ ಎನ್ನುವುದು ಜನರಲ್ಲಿದೆ.  ಈ ಗೊಂದಲ ನಿವಾರಣೆ ಮಾಡಿ ಪ್ರತಿಯೊಬ್ಬರನ್ನು ಭೇಟಿ ಮಾಡಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಆಗಬೇಕು ಎಂದಿದ್ದಾರೆ.

ಎಲ್ಲಾ ಸಮಾಜದಲ್ಲೂ ಬಡವರು, ನಿರ್ಗತಿಕರು, ಹಿಂದುಳಿದವರಿದ್ದಾರೆ. ಅವರೆಲ್ಲರಿಗೂ ಕೂಡ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಉತ್ತಮ ಶಿಕ್ಷಣ ಕೊಡಬೇಕಾಗಿದೆ. ಎಲ್ಲವೂ ಆದಾಗ ಮಾತ್ರ ಆರೋಗ್ಯಯುತ ಸ್ವಸ್ಥ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ಅಸಮಾನತೆ ಹೋಗಲಾಡಿಸಿ ಸಮಾನತೆ ತರಬೇಕು.  ಹಿಂದುಳಿದವರನ್ನು ಮೇಲೆತ್ತಬೇಕು. ಬಡವರನ್ನು ಮೇಲೆ ತರಬೇಕು ಅನ್ನುವ ಉದ್ದೇಶ ಉತ್ತಮವಾದ ಕೆಲಸ. ಹಾಗಾಗಿ ಎಲ್ಲರನ್ನೂ ಕೇಳಿ ವೈಜ್ಞಾನಿಕವಾಗಿ ಜಾತಿಗಣತಿಯನ್ನು ಮಾಡಬೇಕಾಗಿದೆ ಎಂದರು.

ಜಾತಿ ಗಣತಿ ವರದಿಯನ್ನು ಹತ್ತುವರ್ಷದಿಂದ ಯಾತಕ್ಕಾಗಿ ಇಟ್ಟಿದ್ದರು ಜಾರಿ ಮಾಡದೆ ಎನ್ನುವುದು ಗೊತ್ತಿಲ್ಲ.  ಹತ್ತು ವರ್ಷದಿಂದ ಇಟ್ಟುಕೊಂಡು ಈಗ್ಯಾಕೆ ಪ್ರಕಟ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಹತ್ತು ವರ್ಷದಿಂದ ಎಷ್ಟು ಬದಲಾಗಿರಬಹುದು. ಜನಸಂಖ್ಯೆಯಲ್ಲಿ ಬದಲಾವಣೆಯಾಗಿರಬಹುದು. ಆ ಎಲ್ಲವೂ ವ್ಯತ್ಯಾಸ ಆಗುತ್ತದೆ ಎಂದರು.

ಎಲ್ಲರೂ ಕುಳಿತು ಚರ್ಚೆ ಮಾಡಿ ಆ ನಂತರ ಜಾರಿ ಮಾಡುತ್ತೇವೆ ಎಂದಿದ್ದಾರೆ. ಹಾಗಾಗಿ ಯಾರಿಗೂ ಅನ್ಯಾಯವಾಗದಂತೆ ವರದಿ ಜಾರಿಯಾಗಬೇಕು. ಮಠಕ್ಕೆ ಬಂದು ಯಾರು ನನ್ನನ್ನು ಕೇಳಿಲ್ಲ ಜಾತಿ ಗಣತಿ ವರದಿ ಮಾಡುವಾಗ. ಹಾಗಾಗಿ ಹೊಸದಾಗಿ ಜಾತಿ ಗಣತಿ ಆಗಬೇಕು. ವೈಜ್ಞಾನಿಕವಾಗಿ ವರದಿ ರಚನೆಯಾಗಬೇಕು ಎಂದರು.

 ನಮ್ಮ ದೇಶದಲ್ಲಿ ಜಾತಿ ಬಿಟ್ಟು ಏನು ನಡೆಯುತ್ತಿಲ್ಲ. ಜಾತಿ  ವ್ಯವಸ್ಥೆ ಹೋಗಬೇಕು ಅಂದರೆ ಇನ್ನು ಜಾಸ್ತಿಯಾಗುತ್ತಿದೆ. ಕಡಿಮೆ ಆಗುತ್ತಿಲ್ಲ. ಕಡಿಮೆ ಆಗಲ್ಲ ಅನ್ನಿಸುತ್ತಿದೆ. ಜಾತಿ ಬಿಟ್ಟು ಬದುಕುತ್ತೇವೆ ಎನ್ನೋದು ಸಾಧ್ಯವಾಗುತ್ತಾ ಗೊತ್ತಿಲ್ಲ. ಜಾತಿಗೆ ಜೋತು ಬಿದ್ದಿದ್ದಾರೆ. ಮುಂದೆ ಏನಾಗುತ್ತೋ ಗೊತ್ತಿಲ್ಲ. ಆದರೆ ಎಲ್ಲಾ ಜಾತಿಯಲ್ಲಿರುವ ಎಲ್ಲಾ ಬಡವರಿಗೆ ನ್ಯಾಯ ಸಿಗಬೇಕು ಎಂದರು.

Leave a Reply

Your email address will not be published. Required fields are marked *