ತುಮಕೂರು!! ಕಲ್ಪತರು ನಾಡಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ, ಕೆರೆಯಂತಾದ ತುಮಕೂರು

ತುಮಕೂರು!! ಕಲ್ಪತರು ನಾಡಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ, ಕೆರೆಯಂತಾದ ತುಮಕೂರು

ತುಮಕೂರು: ಕಲ್ಪತರುನಾಡು ತುಮಕೂರು ಜಿಲ್ಲೆಯಲ್ಲಿ ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು  ಪ್ರಯಾಸಪಡುವಂತಾಗಿದೆ.

ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಧ್ಯರಾತ್ರಿಯಿಂದ ಸೋನೆ ಮಳೆ ಹಾಗೂ ಒಮ್ಮೆಮ್ಮೆ ಜೋರು ಮಳೆಯಾಗುತ್ತಿರುವುದರಿಂದ ಜನತೆ ಹೊರಗೆ ತೆರಳಲು ಸಾಧ್ಯವಾಗದೆ ಹೈರಾಣಾಗಿದ್ದಾರೆ.

ಈಗಾಗಲೇ ಮಹಾಲಯ ಅಮಾವಾಸ್ಯೆಯಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭೂಮಿ ತಂಪಾಗಿದ್ದು, ಕೊಂಚ ಮಳೆಯಾದರೂ ಸಹ ನೀರು ಹರಿಯುತ್ತಿದೆ. ಹೊಲಗಳು, ತೋಟಗಳಲ್ಲಿ ನೀರು ನಿಂತು ಜಲಾವೃತಗೊಳ್ಳುತ್ತಿವೆ.

ಇನ್ನು ಐದು ದಿನ ಮಳೆ:- ಪರಿಸ್ಥಿತಿ ಹೀಗಿರುವಾಗ ಇನ್ನು 5 ದಿನ ನಿರಂತರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಿರಂತರ ಮಳೆಯಾದರೆ ರಾಗಿ ಬೆಳೆ ಹಾಗೂ ತೋಟಗಳು ನೀರು ತುಂಬಿಕೊಂಡು ಬೆಳೆ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.

ಛಿತ್ರಿಗಳದ್ದೇ ದರ್ಬಾರ್:-

ಇಂದು ಮುಂಜಾನೆ ಟ್ಯೂಷನ್‌ಗೆ ತೆರಳುವ ವಿದ್ಯಾರ್ಥಿಗಳು, ಬೆಳಗಿನ ಪಾಳಿ ಕೆಲಸಕ್ಕೆ ತೆರಳುವ ಕಾರ್ಖಾನೆ ನೌಕರರು ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯಿಂದ ಹೊರ ಬರಲಾಗದೆ ಛತ್ರಿ, ಜರ್ಕಿನ್‌ಗಳ ಮೊರೆ ಹೋಗಿದ್ದು ಕಂಡು ಬಂತು.

ಆರ್ಭಟಿಸಿದ ವರುಣಾ

ಬೆಳಿಗ್ಗೆ 5 ಗಂಟೆಯ ನಂತರ ಮಳೆ ಬಿಡುವು ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ವರುಣ ಮತ್ತಷ್ಟು ಆರ್ಭಟಿಸುತ್ತಿರುವುದು ಎಲ್ಲ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ. ಕೆಲವರು ಕೆಲಸಗಳಿಗೆ ಹೋಗಲಾಗದೆ ರಜೆ ಹಾಕಿ ಮನೆಯಲ್ಲಿದ್ದರೆ, ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಬಿಟ್ಟು ಆಟೋ ರಿಕ್ಷಾಗಳನ್ನು ಆಶ್ರಯಿಸಿ ಕೆಲಸಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಡಾಂಬರು ಕಾಣದ ರಸ್ತೆಗಳು, ನಗರ ಪ್ರದೇಶಗಳಲ್ಲಿನ ಕೆಲ ಬಡಾವಣೆಗಳ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಇದರಿಂದ ಜಿಟಿ ಜಿಟಿ ಮಳೆ ಕಿಚಿಪಿಚಿ ಕೆಸರು ಎನ್ನುವಂತಾಗಿದೆ.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರ ಕೃಷಿ ಕೆಲಸಗಳಿಗೂ ತೊಡಕಾಗಿದ್ದು, ಸದ್ಯ ಮಳೆ ಬಿಡುವು ಕೊಟ್ಟರೆ ಸಾಕು ಎಂದು ದೇವರಲ್ಲಿ ಮೊರೆಯಿಡುವಂತಾಗಿದೆ.

ನಗರ ಪ್ರದೇಶಲ್ಲಿ ವಿದ್ಯಾರ್ಥಿಗಳು, ನೌಕರರು ಹಾಗೂ ಇತರೆ ಕೂಲಿ ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಹೋಗಲು ಸಾಧ್ಯವಾಗದೆ ಆಟೋ ರಿಕ್ಷಾಗಳಿಗೆ ಮುಗಿ ಬೀಳುತ್ತಿದ್ದು, ಇದರಿಂದ ಆಟೋಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ.

ಕೋಡಿ ಬಿದ್ದ ಕೆರೆಗಳು:-

ಈಗಾಗಲೇ ಜಿಲ್ಲೆಯಲ್ಲಿ ತುಮಕೂರು ಅಮಾನಿಕೆರೆ, ಸಿರಾ ಕೆರೆ, ಕುಣಿಗಲ್ ಕೆರೆ ಸೇರಿದಂತೆ ಹಲವಾರು ಕೆರೆಗಳು ಕೋಡಿ ಬಿದ್ದಿದ್ದು, ಮಳೆ ಹೀಗೆ ಮುಂದುವರೆದರೆ ಮತ್ತಷ್ಟು ಕೆರೆಗಳು ಭರ್ತಿಯಾಗಿ ಕೋಡಿ ಬೀಳುವ ಸಾಧ್ಯತೆ ಇದೆ.

ನದಿ ಪಾತ್ರದಲ್ಲಿ ಎಚ್ಚರಿಕೆ:-

ಮಧುಗಿರಿ-ಕೊರಟಗೆರೆ ತಾಲ್ಲೂಕಿನಲ್ಲಿರುವ ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದು, ಈಗಾಗಲೇ ನದಿ ಪಾತ್ರದಲ್ಲಿ ಎಚ್ಚರಿಕೆಯಿಂದ ಓಡಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು, ಫುಟ್‌ಪಾತ್‌ಗಳು ತೊಯ್ದಿದ್ದು, ಜಡಿ ಮಳೆಯಾಗುತ್ತಿರುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಓಡಾಡಬೇಕಾಗಿದೆ.

ಜಾನುವಾರುಗಳ ಮೇವಿಗೆ ಸಂಕಷ್ಟ:-

ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಹಳ್ಳಿಗಳಲ್ಲಿ ಹಸು, ಕರು, ಎಮ್ಮೆ, ಮೇಕೆ, ಕುರಿಗಳನ್ನು ಮೇಯಿಸಲು ರೈತರು ಪರದಾಡುವಂತಾಗಿದ್ದು, ಜಾನುವಾರುಗಳಿಗೆ ಮೇವು ಒದಗಿಸಲು ತುಂಬಾ ಕಷ್ಟಪಡುವಂತಾಗಿದೆ. 

ಮೋಡ ಕವಿದ ವಾತಾವರಣ ಮುಂದುವರೆದಿದೆ. ಇನ್ನು 5 ದಿನಗಳ ಕಾಲ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ವರುಣ ಆರ್ಭಟಿಸುತ್ತಿರುವುದರಿಂದ ಈಗಾಗಲೇ ಜಿಲ್ಲಾಡಳಿತ ಆರೆಂಜ್, ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.

Leave a Reply

Your email address will not be published. Required fields are marked *