ತುಮಕೂರು || ನರೇಗಾ ಹಬ್ಬ : ತುಮಕೂರು ಜಿಲ್ಲಾ ಪಂಚಾಯಿತಿಗೆ 3 ಪ್ರಶಸ್ತಿಗಳು

ತುಮಕೂರು || ನರೇಗಾ ಹಬ್ಬ : ತುಮಕೂರು ಜಿಲ್ಲಾ ಪಂಚಾಯಿತಿಗೆ 3 ಪ್ರಶಸ್ತಿಗಳು

ತುಮಕೂರು : ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದನ್ನು ಪರಿಗಣಿಸಿ ತುಮಕೂರು ಜಿಲ್ಲೆಗೆ ನರೇಗಾ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನರೇಗಾ ಹಬ್ಬದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ರವರು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಭು ಜಿ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ವಿನೂತನ ಕಾರ್ಯಕ್ರಮಗಳಾದ ಗ್ರಾಮ ಪಂಚಾಯಿತಿ ಮಿಷನ್ 500, ಹಸಿರು ಗ್ರಾಮ ಅಭಿಯಾನ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ಕೂಲಿ ಆಧಾರಿತ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಈ ಮೂಲಕ ಬರಗಾಲದ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಅತಿ ಹೆಚ್ಚು ಉದ್ಯೋಗ ನೀಡುವುದರ ಮೂಲಕ ನಿರುದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಿದೆ.

ಉಜ್ಜಿನಿಗೆ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ : ಕುಣಿಗಲ್ ತಾಲೂಕಿನ ಉಜಿನಿ ಗ್ರಾಮ ಪಂಚಾಯಿತಿಗೆ 2025ರ ನರೇಗಾ ಹಬ್ಬದಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ಸಿಕ್ಕಿದೆ. ಹೆಚ್ಚು ಮಾನವ ದಿನಗಳ ಸೃಜನೆ ಮತ್ತು ಸಮುದಾಯ ಆಸ್ತಿಗಳ ಸೃಜನೆಯಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಉಜ್ಜಿನಿ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಸಿಕ್ಕಿದೆ

ಗಂಗಮ್ಮಗೆ ಒಲಿದ ಮೇಟ್ ಪ್ರಶಸ್ತಿ : ಪಾವಗಡ ತಾಲೂಕಿನ ಸಿಕೆಪುರ ಗ್ರಾಮ ಪಂಚಾಯಿತಿಯ ಗಂಗಮ್ಮರಿಗೆ ಮೇಟ್ ಅಥವಾ ಕಾಯಕ ಬಂಧು ಪ್ರಶಸ್ತಿ ಸಿಕ್ಕಿದೆ. ಗಂಗಮ್ಮನವರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರರನ್ನು ಸಂಘಟಿಸುವಲ್ಲಿ ಉತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸುವ ವೇಳೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಭು ಜಿ, ಉಪ ಕಾರ್ಯದರ್ಶಿ (ಅಭಿವೃದ್ಧಿ) ಸಂಜೀವಪ್ಪ ಕೆ ಪಿ ಸೇರಿದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ತಾಂತ್ರಿಕ ಸಿಬ್ಬಂದಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *