ಹೆಣ್ಣುಮಕ್ಕಳೇ ಅನ್ಯಾಯ ಸಹಿಸಬೇಡಿ ನಿರ್ಭೀತಿಯಿಂದ ದೂರು ಕೊಡಿ
ತುಮಕೂರು: ಮಹಿಳೆಯರಿಗೆ ಅನ್ಯಾಯವಾದಾಗ ನಿರ್ಭಿತಿಯಿಂದ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ. ಠಾಣೆಯಲ್ಲಿ ಸ್ಪಂದನೆ ಸಿಗದಿದ್ದರೆ ಮೇಲಾಧಿಕಾರಿಗಳು ಇಲ್ಲವೇ ರಾಜಧಾನಿ ಮೆಜಿಸ್ಟಿಕ್ ಸನಿಹದಲ್ಲೇ ಇರುವ ರಾಜ್ಯ ಮಹಿಳಾ ಆಯೋಗಕ್ಕೆ ಭೇಟಿಕೊಡಿ. ನಿಮ್ಮ ಪರವಾಗಿ ಧ್ವನಿ ಎತ್ತಲು ಮಹಿಳಾ ಆಯೋಗ ಸದಾ ಸನ್ನದ್ಧವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ಪ್ರಜಾ ಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ಟಿವಿ ವತಿಯಿಂದ ಗುರುವಾರ ಏರ್ಪಡಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುತ್ತಾ, ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಅಧ್ಯಕ್ಷೆಯಾಗಿ ಕೇವಲ ಎಂಟು ತಿಂಗಳಲ್ಲಿ 16 ಜಿಲ್ಲೆಗೆ ಪ್ರವಾಸ ಮಾಡಿದ್ದೇನೆ. ಈ ವೇಳೆ ಹೆಣ್ಣುಮಕ್ಕಳು ಮೂಲಭೂತ ಸೌಕರ್ಯಗಳಾದ ಮನೆ, ಕುಡಿಯುವ ನೀರು, ಬಸ್ ವ್ಯವಸ್ಥೆ, ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳನ್ನು ಕಂಡಿದ್ದೇನೆ. ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದಿದ್ದು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಜೊತೆಗೆ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.
ದೇಶದಲ್ಲಿ ಕಾನೂನಿನ ಕೊರತೆ ಇಲ್ಲ. ಆದರೆ, ಸರಿಯಾಗಿ ಪಾಲನೆ ಮಾಡಲಾಗುತ್ತಿಲ್ಲ. ಹಳ್ಳಿ ಜನರಲ್ಲಿ ಸಮಸ್ಯೆಗಳಿದ್ದಾಗ ಅವರ ಮುಂದೆ ಕಾನೂನು ತೆಗೆದುಕೊಂಡು ಹೋಗಬಾರದು, ಅಲ್ಲಿ ಜನರ ಮನಸ್ಸನ್ನು ಗೆಲ್ಲಬೇಕು. ಅಂದಾಗ ಮಾತ್ರ ಸಮಸ್ಯೆಗಳು ಬಗೆಹರಿಯುತ್ತವೆ. ಹಳ್ಳಿಗಳಲ್ಲಿ ಅನಾಧಿಕಾಲದಿಂದ ನಡೆದು ಬಂದ ಆಚರಣೆಗಳು, ಮೂಢನಂಬಿಕೆಗಳು ಇನ್ನೂ ನಿಂತಿಲ್ಲ. ಗೊಲ್ಲರಹಟ್ಟಿಯಲ್ಲಿ ಬಾಣಂತಿಯರನ್ನು ಹೆರಿಗೆಯಾದ ನಂತರ ಊರಿನವರಿಗೆ ಕೃಷ್ಣ ಕುಟೀರ ಮಾಡಿ ಅದರಲ್ಲೇ ಬಿಡುತ್ತಾರೆ. ಚಳಿಗಾಲ ಇರಲಿ, ಮಳೆಗಾಲ ಇರಲಿ ಹುಳ ಹುಪ್ಪಟಿಗಳನ್ನು ಯೋಚಿಸದೆ ಮಗು ಮತ್ತು ಬಾಣಂತಿಯರನ್ನು ಊರಿನಿಂದ ಆಚೆ ಇಡುವಂತಹ ಪದ್ಧತಿಗಳನ್ನು ಯಾವ ದೇವರು ಕೂಡ ಇಂತಹ ಆಚರಣೆಗಳನ್ನು ಮಾಡಿ ಅಂತ ಹೇಳಿಲ್ಲ. ಅವುಗಳನ್ನು ಮನುಷ್ಯರೇ ಮಾಡಿಕೊಂಡು ಬಂದOತಹ ರೂಡಿಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಯಿ ಹೊಟ್ಟೆಯಲ್ಲಿ ಮುಟ್ಟು ಗಟ್ಟಿಯಾಗಿ ಹುಟ್ಟಬೇಕು, ಆದರೆ ಮುಟ್ಟಿನಿಂದ ಅಪಶಕುನವೆಂದು ಊರಿನಿಂದ ಆಚೆ ಇಡುವ ಇದು ಯಾವ ಪದ್ಧತಿ. ಬಾಣಂತಿಯರನ್ನು ಸೂಕ್ಷಮತೆಯಿಂದ ನೋಡಿಕೊಳ್ಳಬೇಕು ಎಂದರು.
ಶಿರಾ ಗೇಟ್ನ ನಿವಾಸಿ ಲಕ್ಷ್ಮಿ ನರಸಮ್ಮ ಎಂಬುವರು ಕರೆ ಮಾಡಿ, ನಮ್ಮ ತಂದೆ ಕರೋನಾದಲ್ಲಿ ತೀರಿ ಹೋದರು. ಪ್ರಸ್ತುತ ನಮ್ಮ ತಾಯಿ ಬೆಂಗಳೂರಿನಲ್ಲಿ ವಾಸ ಮಾಡುತ್ತಾರೆ. ನಾವು ಮೂರು ಜನ ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಒಬ್ಬ ಒಬ್ಬ ಗಂಡು ಮಗ. ಇರುವ ಒಬ್ಬ ಮಗ ನಮ್ಮ ತಾಯಿಗೆ ಕಿರಿಕಿರಿ ಮಾಡಿ ಮನೆ ಆಸ್ತಿಯನ್ನು ನನ್ನ ಹೆಸರಿಗೆ ಬರೆದು ಕೊಡು ಎಂದು ಕಿರಿಕಿರಿ ಮಾಡುತ್ತಿದ್ದಾನೆ. ಈ ಸಂಬOಧ ಹಿರಿಯ ನಾಗರಿಕರ ವೇದಿಕೆಗೆ ಬಳಿ ತೆರಳಿ ನ್ಯಾಯ ಕೇಳಿದರು ದೊರಕಿಲ್ಲ. ಪೊಲೀಸ್ ಇಲಾಖೆ ಹತ್ತಿರ ಹೋದರು ಅಲ್ಲಿಯು ಕೂಡ ಯಾವುದೇ ರೀತಿ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ದೂರಿಗೆ ಉತ್ತರಿಸುತ್ತಾ, ಮಹಿಳಾ ಆಯೋಗಕ್ಕೆ ಕುದ್ದಾಗಿ ನೀವೇ ಬನ್ನಿ. ನಿಮ್ಮ ತಾಯಿಯ ಆಸ್ತಿ ಯಾರ ಬಳಿ ಹೋದರು ಕೋರ್ಟಿಗೆ ಹೋಗಿ, ಅದೇ ಆಸ್ತಿ ನಿಮಗೆ ದೊರಕುವಂತೆ ಮಾಡಲಾಗುತ್ತದೆ. ನಿಮ್ಮ ತಾಯಿಯ ಜೊತೆ ನೀವು ಬೆಂಬಲವಾಗಿ ನಿಲ್ಲಿ. ಯಾವುದೇ ಅಭಯವಿಲ್ಲದೆ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ಸಾಂತ್ವನ ಹೇಳಿದರು.
ತುಮಕೂರು ನಿವಾಸಿ ಜಬಿನಾ ಎನ್ನುವವರು ಕರೆ ಮಾಡಿ, ನನಗೆ ವಿಪರೀತ ಆರೋಗ್ಯದ ಸಮಸ್ಯೆ ಇದೆ. ಪಿತ್ತಕೋಶ ಸಂಬಂಧಿ ಕಾಯಿಲೆ ಕೂಡ ಇದೆ. ನನಗೆ ಮೂರು ಜನ ಮಕ್ಕಳು. ನನ್ನ ಆರೋಗ್ಯದ ಸಮಸ್ಯೆಯಿಂದ ಮಕ್ಕಳನ್ನು ಹಾಗೂ ನನ್ನ ಆರೋಗ್ಯವನ್ನು ನೋಡಿಕೊಳ್ಳಲಾಗುತ್ತಿಲ್ಲ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು. ನಿಮ್ಮ ಮಕ್ಕಳಿಗೆ ಚೆನ್ನಾಗಿ ಓದಿಸಿ. ಅವರಿಗೆ ಕಲಿಯಲು ಬಿಡಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಅಡಿಯಲ್ಲಿ ನೀವು ಯಾವುದಾದರೂ ಉದ್ಯೋಗ ಮಾಡಬಹುದು. ಜೊತೆಗೆ ಅಲ್ಪಸಂಖ್ಯಾತರ ಇಲಾಖೆಗೆ ಭೇಟಿಯಾಗಿ, ಅಲ್ಲಿ ಕೂಡ ಉದ್ಯೋಗದ ನೆರವು ದೊರಕುತ್ತದೆ ಎಂದು ನಾಗಲಕ್ಷ್ಮಿ ಚೌದರಿ ತಿಳಿಸಿದರು.
ತುಮಕೂರು ನಗರ ನಿವಾಸಿ ನೇತ್ರಾವತಿ ಎಂಬುವರು ಸಂಘ-ಸಂಸ್ಥೆಗಳಿಂದ ಸಾಲ ಪಡೆದಿದ್ದೆ. ಅವುಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ. ನನ್ನ ಗಂಡ ಕೂಡ ಬಿಟ್ಟು ಹೋಗಿದ್ದಾನೆ. ನನಗೆ ಕಿಡ್ನಿ ಸಮಸ್ಯೆ ಇದೆ. ಒಂದು ಮಗುವನ್ನು ದತ್ತು ಪಡೆದಿದ್ದೇನೆ. ಅದಕ್ಕೂ ಕೂಡ ಹಾರ್ಟ್ನಲ್ಲಿ ಹೋಲಿನ ಸಮಸ್ಯೆ ಇದೆ. ಇದರಿಂದಾಗಿ ತೀವ್ರ ತೊಂದರೆಗೆ ಒಳಗಾಗಿದ್ದೇನೆ. ಜೀವನ ಹೇಗೆ ಮಾಡಬೇಕೆಂಬುದು ತೋಚುತ್ತಿಲ್ಲ ಎಂದು ತಮ್ಮ ಅಳಲು ಹೇಳಿಕೊಂಡರು. ಇದಕ್ಕೆ ಉತ್ತರಿಸಿದ ಡಾ.ನಾಗಲಕ್ಷ್ಮಿ ಚೌದರಿ ಅವರು, ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುತ್ತೇವೆ. ದತ್ತು ಪಡೆದುಕೊಂಡಿರುವ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಸಾಲದ ಸಮಸ್ಯೆಗಳಿಗೆ ಯಾರಾದರೂ ಕಿರಿಕಿರಿ ಮಾಡಿದರೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇOಟ್ ಮಾಡಿ. ನಿಮಗೆ ಯಾರು ಕೂಡ ಕಿರಿಕಿರಿ ಮಾಡೋದಿಲ್ಲ. ನೀನು ಮಾನಸಿಕವಾಗಿ ಧೈರ್ಯವಾಗಿರು ಎಂದು ದೈರ್ಯ ಹೇಳಿದರು.
ಶಿರಾದಿಂದ ರುದ್ರೇಶ್ ಎಂಬುವರು ನಮ್ಮ ತಾಲೂಕಿನಲ್ಲಿ ಕಾಳಯ್ಯ ಪದ್ಧತಿಗಳನ್ನು ನಂಬಿಕೆಗಳು, ಮೂಢನಂಬಿಕೆಗಳು ಹೆಚ್ಚಾಗಿದೆ. ಬಾಣಂತಿಯರನ್ನು ಊರಿಂದ ಆಚೆ ಇಡುವ ಸಂಪ್ರದಾಯ ಇಂದಿಗೂ ಇದೆ. ಹೆಣ್ಣು ಮಕ್ಕಳಿಗೆ ಸರ್ಕಾರದ ಮಟ್ಟದಲ್ಲಿ ಇದರ ಕುರಿತಾಗಿ ಕಾರ್ಯಕ್ರಮಗಳನ್ನು ಯೋಚಿಸಬೇಕು ಎಂಬ ಪ್ರಶ್ನೆಗೆ, ಬಾಲ್ಯ ವಿವಾಹ, ಬಡತನ ನಿರ್ಮೂಲನೆ ಇವೆಲ್ಲವೂ ನಿರ್ಮೂಲನೆ ಆಗಬೇಕಾದರೆ ಮೊದಲು ಶಿಕ್ಷಣವನ್ನು ಪಡೆಯಬೇಕು. ವೈಜ್ಞಾನಿಕತೆಯನ್ನು ಜನರು ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಎಲ್ಲಾ ಮೂಢನಂಬಿಕೆಯ ಪದ್ಧತಿಗಳು ನಿವಾರಣೆಯಾಗುತ್ತವೆ ಎಂದು ಉತ್ತರಿಸಿದರು.
ತುಮಕೂರು ಗ್ರಾಮೀಣ ನಿವಾಸಿ ನಿರ್ಮಲ ಎಂಬ ಮಹಿಳೆ ಕರೆ ಮಾಡಿ, ನಮ್ಮ ತಂದೆ ತೀರಿ ಹೋದ ನಂತರ ನಮ್ಮ ತಾಯಿಯ ಪೋರ್ಜರಿ ಸಹಿ ಹಾಕಿ ಆಸ್ತಿ ಪಡೆದುಕೊಂಡಿದ್ದಾರೆ ಎಂಬ ದೂರಿಗೆ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳನ್ನು ಭೇಟಿ ಮಾಡಿ. ಅವರ ಬಳಿ ನಡೆದ ಘಟನೆಗಳನ್ನು ಹೇಳಿ. ಅವರು ನಿಮಗೆ ನ್ಯಾಯವನ್ನು ಕೊಡಿಸುತ್ತಾರೆ. ಯಾರು ಯಾವ ಇಲಾಖೆಯಲ್ಲಿ ಅಧಿಕಾರಿಗಳಿದ್ದಾರೆ ಎಂದು ಗೊತ್ತು ಪಡಿಸಿಕೊಳ್ಳಿ. ನೀವು ನಿಮ್ಮ ಸಮಸ್ಯೆಗಳನ್ನು ಆಯಾ ಸಂಬOಧಪಟ್ಟ ಇಲಾಖೆ ಹತ್ತಿರ ಹೋಗಿ ಹೇಳಿಕೊಳ್ಳಿ. ಒಂದು ವೇಳೆ ಅವರು ನಿಮಗೆ ಸ್ಪಂದಿಸದೆ ಇದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಿ ಅಂದು ಭರವಸೆ ನೀಡಿದರು.
ಬಾಗಲಕೋಟೆಯಿಂದ ಸುವರ್ಣ ಎನ್ನುವವರು ಕರೆ ಮಾಡಿ, ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶುಗಳ ಸಾವು ಏರಿಕೆ ಆಗುತ್ತಿದೆ. ಸರ್ಕಾರ ಹಾಗೂ ನೀವು ಯಾವ ಕ್ರಮವನ್ನು ಕೈಗೊಂಡಿದ್ದೀರಾ ಎಂಬ ಪ್ರಶ್ನೆಗೆ, ಹೆರಿಗೆಯಾದ ನಂತರ ಸುಮಾರು ದಿನಗಳವರೆಗೆ ತಾಯಿಯ ಆರೈಕೆ ಮುಖ್ಯವಾಗಿರುತ್ತದೆ. ಅಲ್ಲಿ ಹಲವಾರು ರೋಗ ರೋಜಿಣಿಗಳು ಬರುವ ಸಂದರ್ಭ ಇರುವುದರಿಂದ ಸ್ವಚ್ಛತೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಇತ್ತೀಚಿಗೆ ಬಳ್ಳಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಖುದ್ದಾಗಿ ನಾನೇ ಪರಿಶೀಲಿಸಿದಾಗ ಆಸ್ಪತ್ರೆಯ ಮೇಲೆ ನೀರಿನ ಟ್ಯಾಂಕ್ ಮುಚ್ಚಳ ಕೂಡ ಇರಲಿಲ್ಲ. ಸ್ವಚ್ಛತೆ ಅನ್ನೋದೇ ಇರ್ಲೇ ಇಲ್ಲ. ಮತ್ತು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆರಿಗೆಯಾದ ಆದಷ್ಟು ಬಾಣಂತಿಯರನ್ನು ಕಾರಿಡಾರ್ನಲ್ಲೆ ಹಾಕಿದ್ದರು. ಏಕೆ ಎಂದು ಕೇಳಿದಾಗ ಹೆರಿಗೆಗಳು ಜಾಸ್ತಿಯಾಗಿವೆ. ಹಾಗಾಗಿ ಕಾರಿಡಾರ್ನಲ್ಲಿ ಇರಿಸಿದ್ದೇವೆ ಎಂದರು.
ಆಸ್ಪತ್ರೆಯಲ್ಲಿ ಶೌಚಾಲಯಗಳು ಇದ್ದರೂ ಕೂಡ ಅವುಗಳನ್ನು ಬೀಗ ಹಾಕಿದ್ದರು. ಬಾಣಂತಿಯರು ಹೋಗಬೇಕಾದರೆ ಹೊರಗಡೆ ಹೋಗುವಂಥ ಪರಿಸ್ಥಿತಿ ಎದುರಾಗಿತ್ತು. ಇಂತಹ ಘಟನೆಗಳನ್ನು ಕಂಡಾಗ ನೇರವಾಗಿ ಮುಖ್ಯಮಂತ್ರಿ ಅವರಿಗೆ ಭೇಟಿಯಾಗಿ ಅವರ ಗಮನಕ್ಕೆ ತಂದ ತಕ್ಷಣವೇ ಅಲ್ಲಿನ ಜಿಲ್ಲಾಧಿಕಾರಿಗೆ ತಿಳಿಸಿ ಮಾತುಕತೆ ಮಾಡಿ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ ಎಂದು ಉತ್ತರಿಸಿದರು.
ಗುಬ್ಬಿಯಿಂದ ಭರತ್ ಎಂಬುವರು ಕರೆ ಮಾಡಿ, ಇತ್ತೀಚಿಗೆ ಗುಬ್ಬಿಯಲ್ಲಿ ಬಸ್ಸಿನಿಂದ ಬಿದ್ದು ಮಹಿಳೆಗೆ ತೀವ್ರ ಪೆಟ್ಟಾಗಿದೆ ಎಂಬ ದೂರಿಗೆ ಉತ್ತರಿಸಿ, ಸ್ಥಳೀಯರು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟನಲ್ಲಿ ಒಂದಾಗಿ ಹೋರಾಟ ಮಾಡಬೇಕು. ಅಂದಾಗ ಮಾತ್ರ ಜಯ ಸಿಗುತ್ತದೆ. ನೇರವಾಗಿ ಯಾರು ನೊಂದವರು ಇರತ್ತಾರೆ. ಅವರು ಜನಪ್ರತಿನಿಧಿಗಳನ್ನು ಭೇಟಿಯಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಿ. ಕೆಆರ್ಟಿಸಿ ಅವರ ಜೊತೆ ತಕ್ಷಣ ಮಾತನಾಡಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡುವಂತೆ ಕೋರುತ್ತೇನೆ. ತೊಂದರೆಯಾಗದAತೆ ನೋಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಕುಟುಂಬದೊOದಿಗೆ ಕೆಲಸವನ್ನು ಹೇಗೆ ನಿಭಾಯಿಸುತ್ತೀರಾ: ಹೆಣ್ಣು ಮಗಳಾಗಿ, ಕುಟುಂಬದ ಜೊತೆ ಇರುವುದರಿಂದ ಎಷ್ಟೋ ಸಮಯವಾದರೂ ರಾತ್ರಿ ಮನೆಗೆ ತಲುಪಬೇಕು. ಎಲ್ಲ ಸಂದರ್ಭದಲ್ಲೂ ಕೂಡ ಸಮಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ಹೀಗಾಗಿ ಎಲ್ಲವೂ ಕೂಡ ಸರಾಗವಾಗಿ ನಿಭಾಯಿಸುತ್ತೇನೆ. ಹೆಣ್ಣು ಮಕ್ಕಳು ಅವರ ಶಕ್ತಿಯನ್ನು ಅವರು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಒಂದು ಕಡೆ ಕುಟುಂಬ, ಇನ್ನೊಂದು ಕಡೆ ಸಮಾಜಿಕ ಬದುಕು ನಿಭಾಯಿಸುವ ಬಹುದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಹೆಣ್ಣು ಸಂಕುಲ ಚೆನ್ನಾಗಿರಬೇಕು, ಸಬಲೀಕರಣವಾಗಿರಬೇಕು, ಹೆಣ್ಣು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಡಾ.ನಾಗಲಕ್ಷ್ಮಿ ಚೌದರಿ ಸಲಹೆ ನೀಡಿದರು.
ಮುಟ್ಟು ಮಲಿನವಲ್ಲ, ಮುಟ್ಟು ಗಟ್ಟಿಯಾದರೆ ಜೀವದ ಜನನ : ಗೊಲ್ಲರಹಟ್ಟಿಗಳಲ್ಲಿ ಹಸುಗೂಸು ಬಾಣಂತಿಯರನ್ನು ಮನೆಯಿಂದ ಹೊರಗೆ ಗುಡಿಸಲಿನಲ್ಲಿರಿಸುವ ಆಚರಣೆ ಬಗ್ಗೆ ಸಮುದಾಯದಲ್ಲಿ ತಿಳುವಳಿಕೆ ಮೂಡಿಸುವ ಅಗತ್ಯ ಹೆಚ್ಚಿದೆ ಎಂದು ಶಿರಾದ ರುದ್ರಾಚಾರ್ ಎಂಬುವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಈ ನಿಟ್ಟಿನಲ್ಲಿ ಜಿಲ್ಲೆಯಿಂದಲೇ ಮೊದಲ ಜಾಗೃತಿ ಅಭಿಯಾನ ಪ್ರಾರಂಭಿಸಲಾಗುವುದು. ಮುಟ್ಟು ಮಲಿನವಲ್ಲ, ಮುಟ್ಟು ಗಟ್ಟಿಯಾದಾಗಲೇ ಜೀವದ ಜನನವೆಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.
ನ್ಯಾಯ ಸತ್ಯದ ಪರವಾಗಿದ್ದೇನೆ: ನಾನು ಕಾನೂನು ಪರ, ದೌರ್ಜನ್ಯ ಪ್ರಕರಣಗಳಲ್ಲಿ 99 ಪ್ರತಿಶತ ಸಂತ್ರಸ್ತರು ಮಹಿಳೆಯರೆ ಆಗಿದ್ದಾರೆ. ಹಾಗಂತ ಎಲ್ಲರೂ ಒಳ್ಳೆಯವರಲ್ಲ, ಹೆಣ್ಣಾಗಲಿ ಗಂಡಾಗಲಿ ಕಾನೂನು ಎಲ್ಲರಿಗೂ ಒಂದೆ. ನಾನು ನ್ಯಾಯದ ಪರವಾಗಿ ಇರುತ್ತೇನೆ. ನನ್ನತನವನ್ನು ಮಾರಿಕೊಳ್ಳುವುದಿಲ್ಲ, ಬಿಟ್ಟುಕೊಡುವುದಿಲ್ಲ. ನಾನು ಏನು ಮಾಡಬೇಕು ಅದನ್ನೇ ಮಾಡುತ್ತೇನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಒಂದು ವಿಡಿಯೋ ತುಣುಕನ್ನು 5.5 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ ಅವರೆಲ್ಲರ ಪ್ರೀತಿಗೆ ನಾನು ಅರ್ಹಳಾಗಿದ್ದೇನೆ. ನ್ಯಾಯ ಸತ್ಯದ ಪರವಾಗಿದ್ದೇನೆ.
ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚೇತನ್, ಆಯೋಗದ ಸಿಬ್ಬಂದಿ ವರ್ಗದವರು ಇದ್ದರು.