ತುಮಕೂರು: ಎಂಎಲ್ ಸಿ ರಾಜೇಂದ್ರ ಕೊಲೆ ಸುಫಾರಿ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ ಬೆನ್ನಲ್ಲೇ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.

ಪ್ರಕರಣದ ಪ್ರಮುಖ ಎ-1 ಆರೋಪಿ ಸೋಮ, ಎ-3 ಅಮಿತ್ ಬುಧವಾರ ಸಂಜೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
ಸುಫಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾದ ಇಬ್ಬರು ಆರೋಪಿಗಳು ಸೇರಿದಂತೆ ಉಳಿದ ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿವಿಧ ಅಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಆರ್. ರಾಜೇಂದ್ರ ಅವರು ಸುಫಾರಿ ಪ್ರಕರಣವನ್ನು ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಈ ನಡುವೆ ಸೋಮ ತಲೆಮರೆಸಿಕೊಂಡಿದ್ದ. ತನಿಖೆ ಆರಂಭಿಸಿದ್ದ ವಿಶೇಷ ತಂಡ ಪ್ರಕರಣದ ಆರೋಪಿಗಳಾದ ಭರತ್, ಯತೀಶ್, ಯಶೋಧ, ಪುಷ್ಪಾ ಹಾಗೂ ಪ್ರಮುಖ ಆರೋಪಿ ಸೋಮನ ಸ್ನೇಹಿತ ಮನು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಮನು ಖಾತೆಗೆ 5 ಲಕ್ಷ ಮುಂಗಡವಾಗಿ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಮನುವನ್ನು ಮಂಗಳವಾರ ತಡೆರಾತ್ರಿ ವಶಕ್ಕೆ ಪಡೆದಿದ್ದರು. ಉಳಿದ ಓರ್ವ ಆರೋಪಿ ಗುಂಡಾ ಜೈಲಿನಲ್ಲಿದ್ದಾನೆ.
ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ಎಂಎಲ್ ಸಿ ಆರ್ ರಾಜೇಂದ್ರ ಅವರು ನನ್ನನ್ನು ಕೊಲೆ ಮಾಡಲು ಪ್ರಯತ್ನ ನಡೆದಿದ್ದು, ಕೊಲೆ ಮಾಡಲು 70 ಲಕ್ಷಕ್ಕೆ ಸುಫಾರಿಯಾಗಿದೆ. ಈಗಾಗಲೇ 5 ಲಕ್ಷ ಅಡ್ವಾನ್ಸ್ ಪಡೆಯಲಾಗಿದೆ. ಈ ಬಗ್ಗೆ ಆಡಿಯೋ ಲಭ್ಯವಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರು. ಐದು ಜನ ಆರೋಪಿಗಳಾದ ಸೋಮ, ಭರತ್, ಅಮಿತ್, ಗುಂಡಾ, ಅಮಿತ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಕಳೆದ ನಾಲ್ಕೈದು ದಿನಗಳಿಂದ ತನಿಖೆ ನಡೆಯುತ್ತಿತ್ತು.