ತುಮಕೂರು || 2024ರಲ್ಲಿ ನಡೆದಿದ್ದವು ಬೆಚ್ಚಿ ಬೀಳಿಸುವ ಘಟನೆಗಳು

ತುಮಕೂರು || 2024ರಲ್ಲಿ ನಡೆದಿದ್ದವು ಬೆಚ್ಚಿ ಬೀಳಿಸುವ ಘಟನೆಗಳು

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನಡೆದ ಸಾಕಷ್ಟು ಪ್ರಕರಣಗಳು ರಾಜ್ಯದ ಗಮನ ಸೆಳೆದಿವೆ. ಅದರಲ್ಲೂ ತುಮಕೂರಿನಲ್ಲಿ ನಡೆದ ಅಪಘಾತ ಜಿಲ್ಲೆಯ ಜನರನ್ನೇ‌ ಬೆಚ್ಚಿ ಬೀಳಿಸಿವೆ.  ಅಂತಹ ಘಟನೆಗಳ  ಬಗ್ಗೆ‌ ಇಲ್ಲಿದೆ ನೋಡಿ ಕೊಂಚ ಮಾಹಿತಿ…

ತುಮಕೂರು ಜಿಲ್ಲೆಯಲ್ಲಿ ನಡೆದ ಹಲವು ಘಟನೆಗಳು ಜಿಲ್ಲೆ ಸೇರಿದಂತೆ ರಾಜ್ಯದ ಗಮನ ಸೆಳೆದಿವೆ. 2010 ಜೂನ್ 28ರಂದು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದ ದಲಿತ ಮಹಿಳೆ ಡಾಬಾ ಹೊನ್ನಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಗ್ರಾಮದ 21 ಮಂದಿಗೆ ಜಿಲ್ಲೆಯ 3ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ನೀಡಿತ್ತು. ಈ ಶಿಕ್ಷೆ ಇಡೀ ರಾಜ್ಯದ ಗಮನ ಸೆಳೆದ ಸುದ್ದಿಯಾಗಿತ್ತು. ಇನ್ನೂ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಬಳಸಿ ಮಧುಗಿರಿ ತಾಲೂಕಿನ ಜನಕಲೋಟೆ ಬಳಿಯ ಕೃಷಿ ಹೊಂಡದಲ್ಲಿ ಸ್ಟೋಟ ಮಾಡಿದ್ದ ಪ್ರಕರಣವೂ ರಾಜ್ಯದ ಗಮನ ಸೆಳೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ನನ್ನು ಬಂಧಿಸಿ ಸ್ಥಳ ಮಹಜರು ಮಾಡಿ ನ್ಯಾಯಾಲಯ ಬಂಧನಕ್ಕೆ ನೀಡಲಾಗಿತ್ತು. ಇನ್ನು ಗುಬ್ಬಿ ತಾಲೂಕಿನಲ್ಲಿ ಶಾಲೆ ವಿದ್ಯಾರ್ಥಿಯೊಬ್ಬನ ಕೈ ಬೆರಳುಗಳು ಬಂಡೆ ಸ್ಟೋಟಿಸುವ ಸ್ಟೋಟಕ ಸಿಡಿದು ತುಂಡಾಗಿದ್ದ ಘಟನೆಯೂ ಸದ್ದು ಮಾಡಿತ್ತು. ಅದಲ್ಲದೆ, ನಗರದ ಸಮೀಪಕ್ಕೆ ಹೊಂದಿಕೊಂಡಿರುವ ಮೈದಾಳ ಕೆರೆಯ ನೀರಿನಲ್ಲಿ ಸೆಲ್ಪಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರಿನಲ್ಲಿ ಕೊಚ್ಚಿ ಹೋಗಿ ಬಂಡೆ ಮಧ್ಯೆ ಸಿಲುಕಿದ್ದಳು. ವಿಷಯ ತಿಳಿದ ಕೂಡಲೇ ಸಂಜೆಯಿಂದ ರಾತ್ರಿ 9 ಗಂಟೆಯವರೆಗೂ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ  ಕಾರ್ಯಾಚರಣೆ ಮಾಡಿದರೂ ಯುವತಿ ಪತ್ತೆಯಾಗಲಿಲ್ಲ. ಇದರಿಂದ ಆಕೆ ಬದುಕಿರುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿತ್ತು. ಆದರೆ, ಮರುದಿನ ಕಾರ್ಯಾಚರಣೆಯಲ್ಲಿ ಇಡೀ  ಒಂದು ರಾತ್ರಿ ಉಸಿರು ಬಿಗಿದಿಡಿದು ಕೂತಿದ್ದ ಯುವತಿಯನ್ನು ರಕ್ಷಣೆ ಮಾಡಲಾಯಿತು. ಈ ಪ್ರಕರಣವೂ ಸಹ ರಾಜ್ಯಾದ್ಯಂತ ಸದ್ದು ಮಾಡಿತ್ತು.

ಒಣಕೊಬ್ಬರಿಗೆ ಬಂಗಾರದ ಬೆಲೆ ರೈತರಲ್ಲಿ ಹರ್ಷ:- ಕಲ್ಪತರು ನಾಡು ಕೊಬ್ಬರಿ ಬೆಳೆಗಾರರನ್ನು ಕಳೆದ ಐದಾರು ವರ್ಷಗಳ ಕಾಲ ಬೆಲೆ ಕುಸಿತ ಕಾಡಿತ್ತು. ಕೇವಲ 8 ರಿಂದ 10 ಸಾವಿರ ರೂ ಮಾತ್ರ ಇತ್ತು. ಇದರಿಂದ ಕಲ್ಪತರು ನಾಡಿನ ತೆಂಗು ಬೆಳೆಗಾರರು ತೆಂಗು ಬೆಳೆಯುವ ಆಸಕ್ತಿಯನ್ನೇ ಕಳೆದುಕೊಂಡಿದ್ದರು. ಬೆಲೆ ಚೇತರಿಕಯನ್ನು ಕಾಯುತ್ತಿದ್ದ ರೈತರಿಗೆ 2024ನೇ ವರ್ಷ ಹರ್ಷ ತಂದಿತು.  ಕೊಬ್ಬರಿ ಬೆಲೆ ದಿಢೀರ್ ಏರಿಕೆ ಕಂಡಿತು. ಅಂದರೆ 18 ರಿಂದ 20 ಸಾವಿರದವರೆಗೂ ಕ್ವಿಂಟಾಲ್ ಕೊಬ್ಬರಿ ಮಾರಾಟವಾಯಿತು. ಇದರ ಜೊತೆ ಜೊತೆಗೆ ತೆಂಗು ಬೆಲೆಯೂ ಸಹ ಹೆಚ್ಚಳವಾಯಿತು. 10ರೂ.ಗೆ ಮಾರಾಟವಾಗುತ್ತಿದ್ದ ಒಂದು ತೆಂಗಿನಕಾಯಿ ದಿಢೀರ್ ಏರಿಕೆ ಕಂಡು 25ರಿಂದ30 ರೂ.ಗೆ ಮಾರಾಟವಾಯಿತು. ಒಂದು ಕಡೆ ಮಳೆಯಿಂದ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತರಿಗೆ 2024ನೇ ವರ್ಷ ಕೊಬ್ಬರಿ ಬೆಲೆ ಏರಿಕೆ ಹರ್ಷವನ್ನು ತಂದಿತ್ತು.

ತುಮಕೂರಿಗರನ್ನು ರಂಜಿಸಿದ ದಸರಾ ಉತ್ಸವ:-ಮೈಸೂರು ದಸರಾ ಮಾದರಿಯಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಿದ್ದ ತುಮಕೂರು ದಸರಾ ಉತ್ಸವ ತುಮಕೂರು ಜನರನ್ನು ರಂಜಿಸಿತು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪಟ್ಟು ಹಿಡಿದು ಮೈಸೂರಿನ ನಂತರ ದಸರಾ ಉತ್ಸವವನ್ನು ತುಮಕೂರು ದಸರಾ ಹೆಸರಿನಲ್ಲಿ ಮಾಡಿ ಯಶಸ್ವಿಯಾದರು. ಒಂಬತ್ತು ದಿನಗಳ ಕಾಲ ನಡೆದ ದಸರಾ ಉತ್ಸವ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಗಮನ ಸೆಳೆಯಿತು. ದಸರಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ಅಂಬಾರಿ ಮೆರವಣಿಗೆ, ವಿಂಟೇಜ್ ಕಾರುಗಳ ಪ್ರದರ್ಶನ, ಹೆಚ್ ಎಎಲ್ ಹೆಲಿಕ್ಯಾಪ್ಟರ್  ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಭೀಕರ ಅಪಘಾತಗಳಿಗೆ ಬೆಚ್ಚಿ ಬಿದ್ದ ತುಮಕೂರು ತುಮಕೂರು ಜಿಲ್ಲೆಯ ನಾನಾ ಭಾಗಗಳಲ್ಲಿ ಸಂಭವಿಸಿದ ಭೀಕರ ಅಪಘಾತಗಳಿಗೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದರು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಶಿರಾ ಬಳಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದು,  20 ಪ್ರಯಾಣಿಕರು ಗಾಯಾಳಯಗಳಾಗಿದ್ದರು. ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬಾಲಕಿ ಸೇರಿ ಐದು ಮಂದಿ ದುರ್ಮರಣ ಹೊಂದಿದ್ದ ಅಪಘಾತವೂ ಇಡಿ ರಾಜ್ಯದ ಸುದ್ದಿಯಾಗಿತ್ತು. ಈ ಘಟನೆ  ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಬಳಿ ನಡೆದಿತ್ತು. ಇಂತಹದ್ದೆ ಅಪಘಾತಗಳು ಜಿಲ್ಲೆಯಲ್ಲಿ ಸಾಕಷ್ಟು ಘಟಿಸಿವೆ. ಬೈಕ್ ಅಪಘಾತ, ಕಾರು ಅಪಘಾತ, ಪಾದಾಚಾರಿಗಳ ಮೇಲೆ ಅಪಘಾತ ಹೀಗೆ ನಾನಾ ರೀತಿಯ ಅಪಘಾತದಲ್ಲಿ ಸಾಕಷ್ಟು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ

Leave a Reply

Your email address will not be published. Required fields are marked *