ತುಮಕೂರು:- ಕಳೆದ ಎರಡ್ಮೂರು ವರ್ಷಗಳ ಹಿಂದೆ ಪಾತಾಳ ಕಂಡಿದ್ದ ತೆಂಗಿನ ಕಾಯಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ಎರಡ್ಮೂರು ತಿಂಗಳಿನಿಂದ ತೆಂಗಿನ ಕಾಯಿ ಬೆಲೆ ಏರಿಕೆ ಕಾಣುತ್ತಿರುವುದು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಾರುಕಟ್ಟೆಗಳಲ್ಲಿ ಒಂದು ತೆಂಗಿನ ಕಾಯಿ ಬೆಲೆ 25ರಿಂದ 35, 40 ರೂ.ವರೆಗೂ ಏರಿಕೆಯತ್ತ ಸಾಗುತ್ತಿದೆ. ಇದರಿಂದ ಇಷ್ಟು ವರ್ಷ ಬೆಲೆ ಇಲ್ಲದೆ ಬದುಕು ಬರಡಾಗಿದ್ದ ತೆಂಗು ಬೆಳೆಗಾರರ ಬದುಕಿದೆ ಒಂದಷ್ಟು ಆರ್ಥಿಕ ಚೈತನ್ಯ ತರುತ್ತಿದೆ.
ಪ್ರಸುತ್ತ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ತೆಂಗಿನ ಕಾಯಿಗಳ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಕಂಡಿದೆ. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ತೆಂಗು ಕೂಡ ದುಬಾರಿಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲೂ ತೆಂಗಿನಕಾಯಿಗಳನ್ನು ಹೆಚ್ಚಾಗಿ ಬಳಸುವ ಹೋಟೆಲ್ ಉದ್ಯಮಕ್ಕೆ ಮತ್ತಷ್ಟು ಹೊರೆಯಾಗುತ್ತಿದೆ. ಕೆಲವೆಡೆ ಹಾಸನ, ತುಮಕೂರುಗಳಿಂದ ತೆಂಗಿನ ಕಾಯಿ ತರಿಸಿಕೊಳ್ಳುವ ಕೆಲಸ ಆಗುತ್ತಿದೆ. ಸದ್ಯಕಂತು ಬೆಲೆ ಇಳಿಯುವ ಸಾಧ್ಯತೆ ಕಡಿಮೆ ಎಂಬುದು ಕೇಳಿಬರುತ್ತಿದೆ.
ಬೆಲೆ ಏರಿಕೆ ಆತಂಕದಲ್ಲಿ ಗ್ರಾಹಕರು
ಮಾರುಕಟ್ಟೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ತೆಂಗಿನ ಕಾಯಿ ಬೆಲೆ ಏರಿಕೆಯಿಂದಾಗಿ ತೆಂಗಿನಕಾಯಿ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಸಾಲು-ಸಾಲು ಹಬ್ಬ, ಸಮಾರಂಭದ ಅಡುಗೆ, ಹೋಟೆಲ್, ಶುಭ ಕಾರ್ಯಗಳಲ್ಲಿ ಫಲ ತಾಂಬೂಲ ನೀಡುವವರಿಗೆ ಇನ್ನಿಲ್ಲದ ಯೋಚನೆ ತಂದಿದೆ. ದೇಶದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ಬೆಳೆಯಲಾಗುತ್ತಿದೆ. ರಾಜ್ಯದ ಎಲ್ಲಾ ಕಡೆಗಳಲ್ಲೂ ತೆಂಗಿಗೆ ಬೇಡಿಕೆಯಿದೆ. ಆದರೆ ಬೇಡಿಕೆ ತಕ್ಕಂತೆ ತೆಂಗು ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ದರವು ಗಣನೀಯವಾಗಿ ಏರಿಕೆ ಕಂಡುಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಇರುವುದರಿಂದ ತೆಂಗು ಮತ್ತಷ್ಟು ದುಬಾರಿಯಾಗುವ ಆತಂಕವಿದೆ.
ಹೋಟೆಲ್ ಉದ್ಯಮಕ್ಕೆ ತಲೆಬಿಸಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಈ ಭಾಗದಲ್ಲಿ ಆಹಾರ ಉದ್ಯಮ ದೊಡ್ಡ ಪ್ರಮಾಣದಲ್ಲಿದೆ. ಹೋಟೆಲ್, ಕ್ಯಾಂಟಿನ್ಗಳಲ್ಲಿ ಆಹಾರ ತಯಾರಿಕೆಗೆ ಪ್ರತಿದಿನ ಹತ್ತಾರು ತೆಂಗಿನ ಕಾಯಿಗಳನ್ನು ಬಳಸುತ್ತಾರೆ. ಆದರೆ ಉತ್ತಮ ಗಾತ್ರದ ತೆಂಗಿನಕಾಯಿಗಳು 800 ಗ್ರಾಂ. ನಿಂದ 1 ಕೆಜಿವರೆಗೂ ತೂಗುವುದರಿಂದ ಒಂದು ಕಾಯಿಗೆ 50 ರೂ ನೀಡುವ ಪರಿಸ್ಥಿತಿಯಿದೆ. ಇದರಿಂದ ಆಹಾರ ಉದ್ಯಮಗಳ ಮಾಲೀಕರಿಗೆ ತೆಂಗಿನಕಾಯಿ ದರದ ಬಿಸಿ ತಟ್ಟಿದ್ದು, ಕೆಲವೆಡೆ ತೆಂಗಿನ ಕಾಯಿ ಬಳಕೆ ಕಡಿಮೆ ಮಾಡಲಾಗಿದೆ.