ತುಮಕೂರು – ನೆಲಮಂಗಲ ನಡುವೆ ರಾಷ್ಟ್ರಿಯ ಹೆದ್ದಾರಿ 48ರಲ್ಲಿ ಎರಡು ಟೋಲ್ ಪ್ಲಾಜಾಗಳಿವೆ. ಆದರೆ ಇನ್ನು ಕೆಲವೇ ತಿಂಗಳಿನಲ್ಲಿ ಈ ಎರಡೂ ಟೋಲ್ ಪ್ಲಾಜಾಗಳು ಬಂದ್ ಆಗಲಿವೆ. ಹೌದು, ತುಮಕೂರು ರಸ್ತೆಯಲ್ಲಿರುವ ಚೊಕ್ಕೇನಹಳ್ಳಿ ಮತ್ತು ಕುಲುಮೇಪಾಳ್ಯ ಟೋಲ್ ಪ್ಲಾಜಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದರಿಂದ ವಾಹನ ಸವಾರರ ಸಮಯ ಉಳಿತಾಯವಾಗಲಿದೆ. ಆದರೆ ಟೋಲ್ ಶುಲ್ಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ!
ಹೌದು ಈ ಎರಡೂ ಟೋಲ್ ಪ್ಲಾಜಾಗಳನ್ನು ಮುಚ್ಚಿ, ಕೇವಲ ಒಂದು ಟೋಲ್ ಪ್ಲಾಜಾ ನಿರ್ಮಾಣ ಮಾಡಲು ಎನ್‌ಎಚ್‌ಎಐ ಅಧಿಕಾರಿಗಳು ನಿರ್ಧರಿಸಿದ್ದಾರೆ. ನೆಲಮಂಗಲ – ತುಮಕೂರು ನಡುವೆ ಈಗ ಇರುವ ನಾಲ್ಕು ಪಥಗಳ ರಾಷ್ಟ್ರಿಯ ಹೆದ್ದಾರಿಯನ್ನು ಎಕ್ಸ್‌ಪ್ರೆಸ್‌ವೇ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದ ಬಳಿಕ ಈಗ ಇರುವ ಎರಡೂ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಲಾಗುತ್ತದೆ.
ಈಗ ಇರುವ ನಾಲ್ಕು ಪಥಗಳ ರಸ್ತೆಯನ್ನು ಆರು ಪಥಗಳಿಗೆ ವಿಸ್ತರಣೆ ಮಾಡುವ ಕೆಲಸ ನಡೆಯುತ್ತಿದ್ದು, 2025ರ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯುವ ನಿರೀಕ್ಷೆ ಮಾಡಲಾಗಿದೆ. ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದ ಬಳಿಕ ಚೊಕ್ಕೇನಹಳ್ಳಿ ಮತ್ತು ಕುಲುಮೇಪಾಳ್ಯ ಟೋಲ್ ಪ್ಲಾಜಾ ಮುಚ್ಚಿ, ರಾಯರಪಾಳ್ಯದಲ್ಲಿ ಹೊಸ ಟೋಲ್ ಪ್ಲಾಜಾ ಸ್ಥಾಪನೆ ಮಾಡಲು ಎನ್‌ಎಚ್‌ಎಐ ಯೋಜಿಸಿದೆ.
2004ರಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಎರಡೂ ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗಿತ್ತು. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳುವ ವಾಹನ ಸವಾರರು ಕುಲುಮೇಪಾಳ್ಯ, ಚೊಕ್ಕೇನಹಳ್ಳಿ, ತುಮಕೂರು ಸಿರಾ ನಡುವೆ ಇರುವ ಕರೆಜೀವನಹಳ್ಳಿ ಮತ್ತು ಹಿರಿಯೂರು ಚಿತ್ರದುರ್ಗ ನಡುವೆ ಇರುವ ಗುಯಿಲಾಳು ಟೋಲ್‌ಪ್ಲಾಜಾದಲ್ಲಿ ಹಣ ಪಾವತಿ ಮಾಡಬೇಕು. ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದ ಬಳಿಕ ಒಂದು ಟೋಲ್ ಪ್ಲಾಜಾ ಕಡಿಮೆಯಾಗಲಿದೆ
ಟೋಲ್ ದರ ನಿಗದಿಯಾಗಿಲ್ಲ
ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾದ ಬಳಿಕವಷ್ಟೇ ಹೊಸ ಟೋಲ್ ಕಾರ್ಯನಿರ್ವಹಿಸಲಿದೆ. ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದ ಬಳಿಕ ಹೊಸ ಟೋಲ್ ದರ ನಿಗದಿ ಮಾಡಲಾಗುತ್ತದೆ. ಈಗಾಗಲೇ ನೆಲಮಂಗಲ ತುಮಕೂರು ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದ ಬಳಿಕ ಯಾರೂ ಕೂಡ ಟೋಲ್ ಪಾವತಿ ಮಾಡದೇ ಹೆದ್ದಾರಿಗೆ ಪ್ರವೇಶಿಸುವುದು ಸಾಧ್ಯವಿಲ್ಲ. ಅತಿಕ್ರಮವಾಗಿ ಪ್ರವೇಶ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನೆಲಮಂಗಲ ಟೋಲ್ ಪ್ಲಾಜಾ ವಿರುದ್ದ ದೂರು
ನೆಲಮಂಗಲ ಟೋಲ್ ಪ್ಲಾಜಾದಲ್ಲಿ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಟೋಲ್ ಪ್ಲಾಜಾ ಮೂಲಕ ಪ್ರಯಾಣಿಸದೇ ಇದ್ದರೂ ಹಣ ಕಡಿತವಾಗುತ್ತಿದೆ ಎಂದು ದೂರಲಾಗಿದೆ. ಈ ಸಂಬಂಧ ಅಧಿಕಾರಿಗಳು ಸಚಿವಾಲಯಕ್ಕೆ ಮಾಹಿತಿ ನೀಡಿದ್ದು ಗುತ್ತಿಗೆದಾರನನ್ನು
ಬದಲಾಯಿಸಿದ್ದಾರೆ. ಹೊಸ ಟೋಲ್ ನಿರ್ಮಾಣವಾದ ಬಳಿಕ ಎಲ್ಲಾ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.