ತುಮಕೂರು: 2024ನೇ ಸಾಲಿನಲ್ಲಿ ರಾಜ್ಯದ ಗಮನ ಸೆಳೆದ ಹಲವು ಘಟನೆಗಳು ತುಮಕೂರು ಜಿಲ್ಲೆಯಲ್ಲಿ ನಡೆದಿವೆ. ಅಂತಹ ಘಟನೆಗಳ ಪೈಕಿ ಟಾಪ್ ಹತ್ತು ಸುದ್ದಿಗಳ ಇಂಟ್ ಇಲ್ಲಿದೆ ನೋಡಿ….
1) 2024ನೇ ವರ್ಷದ ಆರಂಭದಲ್ಲಿ ಕೊಬ್ಬರಿ ಬೆಲೆ ಕುಸಿತವಾಗಿತ್ತು. ಕೊಬ್ಬರಿ ಬೆಲೆ ಹೆಚ್ಚಳಕ್ಕಾಗಿ ಸಾಕಷ್ಟು ಹೋರಾಟ ಮತ್ತು ಪಾದಯಾತ್ರೆಯನ್ನು ಮಾಡಲಾಯಿತು. 2024ರ ಮಧ್ಯಂತರದ ನಂತರದ ದಿನಗಳಲ್ಲಿ ಬೆಲೆ ದಿಢೀರ್ ಏರಿಕೆ ಕಂಡಿತು. ತೆಂಗು ಬೆಳೆಗಾರರು ಫುಲ್ ಖುಷಿ ಪಟ್ಟರು. ಈ ದು:ಖದ ಮತ್ತು ಖುಷಿ ಸುದ್ದಿ ರಾಜ್ಯದ ಗಮನ ಸೆಳೆದಿತ್ತು.
2) ಹೇಮಾವತಿ ಎಕ್ಸ್ಪ್ರೆಕ್ಸ್ ಲಿಂಕ್ ಕೆನಾಲ್ ವಿಚಾರ ಇಡೀ ವರ್ಷ ಕಾಡಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಲಿಂಕ್ ಕೆನಾಲ್ ವಿರೋಧದ ಅಲೆಯ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು. ಆರಂಭದಲ್ಲಿ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದರು. ನಂತರ ವಿವಿಧ ಸಂಘಟನೆಗಳು ಸ್ವಾಮೀಜಿಗಳು ಹೋರಾಟಕ್ಕೆ ಕೈಜೋಡಿಸಿದರು. ಇದರ ಭಾಗವಾಗಿ ಒಂದು ಭಾರಿ ತುಮಕೂರು ಬಂದ್ ಮಾಡಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಮನೆ ಮುತ್ತಿಗೆಯನ್ನೂ ಹಾಕಿದರು. ನಂತರ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ ಸ್ವಲ್ಪ ತಣ್ಣಗಾದ ಹೋರಾಟ ಮತ್ತೆ ಕಾವು ಪಡೆದುಕೊಂಡಿದ್ದು, ಈಗಲೂ ಹೋರಾಟದ ಕಾವು ಕಡಿಮೆಯಾಗಿಲ್ಲ.
3)ನಗರದ ಹೃದಯ ಭಾಗದಲ್ಲಿರುವ ಸಿದ್ದಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಮಾಲ್ ಹಾಗೂ ಬಹುಮಡಿ ಕಟ್ಟಡ ನಿರ್ಮಾಣಕ್ಕೆ ಬಿಜೆಪಿ ನಾಯಕರು ಸೇರಿದಂತೆ ವ್ಯಾಪಾರಸ್ಥರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿ ನೂರಾರು ವ್ಯಾಪಾರಸ್ಥರು ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಈ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಬಾರದು ಎಂದು ಬೃಹತ್ ಪ್ರತಿಭಟನೆ ಮಾಡಿದ್ದರು. ಇದೇ ಸ್ಥಳದಲ್ಲಿ ಸಿದ್ದಿವಿನಾಯಕನ ದೇವಸ್ಥಾನವಿದ್ದು, ಅದನ್ನು ಯಾವುದೇ ಕಾರಣಕ್ಕೂ ಒಡೆಯಬಾರದು ಎಂಬ ಭಾರಿ ವಿರೋಧ ವ್ಯಕ್ತಪಡಿಸಿದ್ದ ಘಟನೆಯೂ ಸಹ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸುದ್ದಿ ಮಾಡಿತ್ತು.
4)ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡ ದೇವರಾಜು ಅರಸು ಕೆಸ್ಸಾರ್ಟಿಸಿ ಬಸ್ ನಿಲ್ದಾಣ ಹೊಸದಾಗಿ ಉದ್ಘಾಟನೆಯಾಯಿತು. ಸುಮಾರು 111 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
5) ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ ಇಡೀ ತುಮಕೂರು ಜಿಲ್ಲೆಯ ಜನ ತುಮಕೂರಿನಲ್ಲಿಯೇ ನಿರ್ಮಾಣವಾಗಬೇಕು ಎಂಬ ಧ್ವನಿಯನ್ನು ಎತ್ತಿದ್ದಾರೆ. ಇದಕ್ಕೆ ರಾಜಕೀಯ ನಾಯಕರೂ ಸಹ ತುಮಕೂರಿನಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
6) ದಶಕಗಳ ಕಾಲದಿಂದಲೂ ಕನಸಾಗಿಯೇ ಉಳಿದಿದ್ದ ಸೇತುವೆ ನಿರ್ಮಾಣವಾಗಿದ್ದು ಪ್ರಯಾಣಿಕರಿಗೆ ಖುಷಿ ತಂದ ಸುದ್ದಿಯಾಗಿದೆ. ತುಮಕೂರಿನ ಅಮಾನಿಕೆರೆ ಕೋಡಿ ಬಳಿಯಿದ್ದ ಕಿರಿದಾದ ಸೇತುವೆಯಿಂದಾಗಿ ಸಾಕಷ್ಟು ಅಪಘಾತಗಳಾಗಿದ್ದವು. ಇದರಿಂದ ಜನ ಸೇತುವೆ ಅಗಲೀಕರಣ ಮಾಡಬೇಕು ಎಂದು ದಶಕಗಳಿಂದಲೂ ಒತ್ತಾಯ,ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಅದು ಫಲಿಸಿರಲಿಲ್ಲ. ಆದರೆ, 2024ನೇ ವರ್ಷದಲ್ಲಿ ಸೇತುವೆ ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ಅನುವಾಯಿತು.
7) ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಕೆಳಸೇತುವೆ ಕಾಮಗಾರಿಗಳಿಂದಾಗಿ, ವಿಳಂಬ ಕಾಮಗಾರಿಗಳಿಂದ ಹೆದ್ದಾರಿ ವಾಹನ ಸವಾರರು ನಿತ್ಯ ಸಂಚಾರಕ್ಕೆ ಸಂಕಷ್ಟಪಡುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ.
8) ತುಮಕೂರು ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಅಂತರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಇಡೀ ರಾಜ್ಯದ ಗಮನ ಸೆಳೆದ ಸುದ್ದಿಯಾಗಿತ್ತು.
9) ತುಮಕೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ನಗರದ ಪ್ರವಾಸಿ ಮಂದಿರದಲ್ಲಿ ಕಚೇರಿ ತೆರೆಯುವ ವಿಚಾರವಾಗಿ ಮುಸುಕಿನ ಗುದ್ದಾಡ ನಡೆದಿತ್ತು. ಅಂತಿಮವಾಗಿ ಅವರು ಪ್ರವಾಸಿ ಮಂದಿರದಲ್ಲಿಯೇ ಕಚೇರಿಯನ್ನು ಆರಂಭಿಸಿದರು.
10) ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಆಗಿದ್ದಾಂಗೆ ನಾಯಿಗಳು ಕಡಿತದ ಪ್ರಕರಣ ದಾಖಲಾಗಿದ್ದವು. ನಗರದಲ್ಲೂ ನಾಯಿ ಕಡಿತ ಪ್ರಕರಣ ಹೆಚ್ಚಾಗಿದ್ದವು. ಇದರಿಂದ ಸಿಟ್ಟಿಗದ್ದ ಜನ ನಾಯಿಗಳ ಕಡಿವಾಣಕ್ಕೆ ಆಕ್ರೋಶ ಹೊರಹಾಕಿದ್ದರು. ಪಾಲಿಕೆ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿತ್ತು.