ತುಮಕೂರು : ಕಳೆದ ಒಂದು ವಾರದಿಂದ ಕಲ್ಪತರು ನಾಡಲ್ಲಿ ಜಲಧಾರೆ ಆರ್ಭಟ ಜೋರಾಗಿದ್ದು, ಸತತವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಜಲಾಶಯ, ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿವೆ.
ಕಲ್ಪತರು ನಾಡಿನತ್ತ ‘ಚಿತ್ತ’ ಹರಿಸಿರುವ ಮಳೆ ಸಕಾಲಕ್ಕಲದಿದ್ದರೂ ಅಕಾಲಿಕವಾಗಿಯಾದರೂ ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಕಲ್ಪತರು ನಾಡಿನ ಸೊಬಗು ಹರಿಸಿನೊದ್ದು ರಮಣಿಸುತ್ತಿದೆ. ಕಾಡು-ಮೇಡುಗಳಲ್ಲಿ ಹಕ್ಕಿ-ಪಕ್ಷಿಗಳ ಚಿಲಿಪಿಲಿ, ಸಿಹಿ ಹೀರುವ ದುಂಬಿಗಳ ಝೇಂಕಾರದ ಸದ್ದಿನೊಂದಿಗೆ ಮಳೆಯಿಂದ ಹರಿಯುತ್ತಿರುವ ಹಳ್ಳ-ಕೊಳ್ಳಗಳ ಝುಳು-ಝುಳು ಸುದ್ದು ಕಿವಿಯನ್ನ ಇಂಪಾಗಿದ್ದು, ಮಳೆ ಇಳೆಯನ್ನು ಇಂಪಾಗಿಸಿದೆ.
ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆಯ 371 ಕೆರೆಗಳು ಒಳಗೊಂಡಂತೆ ಕುಡಿಯುವ ನೀರು ಮತ್ತು ನೀರಾವರಿಯ ಜೀವಜಲವಾಗಿರುವ ಎಲ್ಲಾ ಕೆರೆಗಳು ಭರ್ತಿಯಾಗಿವೆ. ಈ ಪೈಕಿ ಕೆಲವು ಬೃಹತ್ ಕೆರೆಗಳು ಉಕ್ಕಿ ಹರಿಯದಿದ್ದರೂ ತುಂಬಿವೆ. ಪ್ರಮುಖವಾಗಿ ಮಾರ್ಕೋನಹಳ್ಳಿ, ತೀತಾ, ನಾಗಲಮಡಿಕೆ ಜಲಾಶಯಗಳು ಭರ್ತಿಯಾಗಿವೆ. ಜಯಮಂಗಲಿ ನದಿ ಮೈತುಂಬಿ ಹರಿಯುತ್ತಿದ್ದಾಳೆ.
ವೈವಿಧ್ಯಮಯ ಕಲ್ಪತರು ನಾಡಲ್ಲಿರುವ ಕೆರೆಗಳು, ಜಲಾಶಯಗಳು ಸಹ ವೈವಿಧ್ಯಮಯವಾಗಿವೆ. ವಿವಿಧ ಆಕಾರಗಳ ವೈವಿಧ್ಯಮಯ ಕೆರೆಗಳು ಭರ್ತಿಯಾಗಿ ಭೋರ್ಗರೆಯುತ್ತಿವೆ. ತುಮಕೂರಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹೇಮಾವತಿ ಆಶ್ರಿತ ಕೆರೆಗಳಲ್ಲಿ ನೀರಿದೆ. ಅಮಾನಿಕೆರೆ, ಮರಳೂರು ಕೆರೆ, ಗೂಳೂರು ಸೇರಿದಂತೆ ಪ್ರಮುಖ ಕೆರೆಗಳು ಭರ್ತಿಯಾಗಿವೆ. ಕುಣಿಗಲ್ನ ಚಿಕ್ಕಗೆರೆ ಭರ್ತಿಯಾಗಬೇಕಿದೆ. ದೀಪಾಂಬುದಿ, ಬೇಗೂರು, ಕೊತ್ತಗೆರೆ ಕೆರೆಗಳು, ಯಡಿಯೂರು ಹೋಬಳಿಯ ಎಲ್ಲಾ 42 ಕೆರೆಗಳು ತುಂಬಿವೆ.
ತುರುವೇಕೆರೆ ತಾಲೂಕಿನ ದೊಡ್ಡಶೆಟ್ಟಿಕೆರೆ, ವಿಠ್ಠಲಪುರ ನಾಗಲಪುರ ಕೆರೆ ಮೊದಲಾದ ಕೆರೆಗಳಲ್ಲಿ ನೀರು ತುಂಬಿವೆ. ಗುಬ್ಬಿಯ ಎಂಚಿ ಪಟ್ಟಣ, ಬಿದರೆ, ದೊಡ್ಡಗುಣಿ, ನಿಟ್ಟೂರು, ಚೇಳೂರು, ಹಾಗಲವಾಡಿ ಕೆರಗಳು, ಕೊರಟಗೆರೆಯ ಅಗ್ರಹಾರ, ಚಿಕ್ಕನಾಯಕನಹಳ್ಳಿಯ ನವಿಲೆಕೆರೆ, ದುರ್ಗದಕೆರೆ, ಶೆಟ್ಟಿಕೆರೆ, ಪಾವಗಡದ ಪಳವಳ್ಳಿ, ನಾಗಲಮಡಿಕೆ, ರಾಜವಂತಿ, ಬ್ಯಾಡನೂರು ಕೆರೆಗಳು ನೀರು ಕಂಡಿವೆ.
ಮಧುಗಿರಿ ತಾಲೂಕಿನಲ್ಲಿ ಬಿಜವರ, ಕೊಡಿಗೇನಹಳ್ಳಿ, ದೊಡ್ಡಮಾಲೂರು, ಕಡಗತ್ತೂರು ಮೊದಲಾದ ಕೆರೆಗಳು, ಶಿರಾದ ದೊಡ್ಡಕೆರೆ, ಮದಲೂರು ಕೆರೆ, ಕಳ್ಳಂಬೆಳ್ಳ ಕೆರೆ, ತಿಪಟೂರಿನ ನೊಣವಿನ ಕೆರೆ, ಈಚನೂರು ಕೆರೆಗಳು ತುಂಬಿವೆ
ಜಿಲ್ಲೆಯಲ್ಲಿ ನೀರಾವರಿ ಕೆರೆಗಳು:- ನೀರಾವರಿ ಇಲಾಖೆಗೆ ಸಂಬ೦ಧಿಸಿದಂತೆ ಜಿಲ್ಲೆಯಲ್ಲಿ 771 ಕೆರೆಗಳಿವೆ. ಕುಣಿಗಲ್ ತಾಲೂಕಿನಲ್ಲಿ 26, ತುಮಕೂರಿನಲ್ಲಿ 48, ಚಿಕ್ಕನಾಯಕನಹಳ್ಳಿಯಲ್ಲಿ 38, ಕೊರಟಗೆರೆಯಲ್ಲಿ 45, ಮಧುಗಿರಿಯಲ್ಲಿ 56, ಪಾವಗಡ 38, ಶಿರಾ 62, ಗುಬ್ಬಿ 31, ತುರುವೇಕೆರೆ 3 ಮತ್ತು ತಿಪಟೂರಲ್ಲಿರುವ 24 ಕೆರಗಳು ಮಳೆಯ ಆರ್ಭಟಕ್ಕೆ ತುಂಬಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಎದುರಾಗುವ ಸಮಸ್ಯೆಗೆ ತಲೆಕೆಡಿಸಿಕೊಳ್ಳುವಂತಿಲ್ಲ.