ತುಮಕೂರು: ಡಾಬಾ ಹೊನ್ನಮ್ಮ ಭೀಕರ ಸಾವು ಇಡೀ ರಾಜ್ಯದ ಗಮನ ಸೆಳೆದಿತ್ತು. ಹಂತಕರು ಆಕೆಯ ಮೇಲೆ ಕಲ್ಲುಗಳನ್ನು ಹಾಕುತ್ತಿದ್ದರೆ ರಕ್ತದ ಮಡುವಿನಲ್ಲಿಯೂ ಉಸಿರು ನಿಲ್ಲುವ ಕೊನೆ ಘಳಿಗೆಯಲ್ಲಿಯೂ ಬಿಗಿದು ಬರುತ್ತಿದ್ದ ಉಸಿರಿನ ನಡುವೆಯೂ ನರಳಾಡುತ್ತಾ ನನ್ನನ್ನ ಬದುಕಿಸಿ ಎಂದು ಬೇಡಿಕೊಳ್ಳುತ್ತಿದ್ದರು ಹೊನ್ನಮ್ಮ. ನೀರು ಕೊಡಿ ಎಂದಾಗಲು ಸೈಜು ಕಲ್ಲುಗಳನ್ನು ಆಕೆ ಮೇಲೆ ಎಸೆದು ಬರ್ಬರವಾಗಿ ಕೊಂದಿದ್ದರು. ಹೊನ್ನಮ್ಮನ ಸಾವನ್ನ ಖಚಿತಪಡಿಸಿಕೊಂಡ ಬಳಿಕವೂ ಹಂತಕರು ಅಲ್ಲಿಂದ ತೆರಳಿದಿದ್ದರು.
ಈ ಪ್ರಕರಣದ ಹಂತಕರಿಗೆ ಈಗ ತುಮಕೂರು ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಒಂದೇ ಗ್ರಾಮದ 27ಮಂದಿ ಕಲ್ಲುಗಳನ್ನು ಎತ್ತಿಹಾಕಿ ಡಾಬಾ ಹೊನ್ನಮ್ಮನನ್ನ ಬರ್ಬರ ಹತ್ಯೆ ಮಾಡಿದ್ದ ಹಂತಕರಿಗೆ ಸತತ ಒಂದೂವರೆ ದಶಕದ ನಂತರ ಶಿಕ್ಷೆಯಾಗಿ. 27 ಜನರಲ್ಲಿ 6 ಮಂದಿ ತೀರ್ಪು ಬರುವುದಕ್ಕೂ ಮೊದಲೆ ಸಾವನ್ನಪ್ಪಿದ್ದು, ಉಳಿದ 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.
ಮರಕಂಬಿ ಘಟನೆಯಂತೆಯೇ ಡಾಬಾ ಹೊನ್ನಮ್ಮನ ಪ್ರಕರಣದಲ್ಲಿ ಬರೋಬ್ಬರಿ 21ಅಪರಾಧಿಗಳಿಗೆ ತುಮಕೂರು ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪರಿಶಿಷ್ಟ ಜಾತಿಯ ಮಹಿಳೆಯ ಬರ್ಬರ ಹತ್ಯೆ ಪ್ರಕರಣದಲ್ಲಿ 21 ಮಂದಿಗೆ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಲಿತ ಮಹಿಳೆ ಕೊಲೆ ಮತ್ತು ಜಾತಿನಿಂದನೆ ಪ್ರಕರದಲ್ಲಿ ಒಟ್ಟು 27 ಆರೋಪಿಗಳ ಮೇಲೆ ದೂರು ದಾಖಲಾಗಿತ್ತು. ತೀರ್ಪು ಪ್ರಕಟವಾಗುವ ಮುನ್ನವೇ 27 ಆರೋಪಿಗಳ ಪೈಕಿ ಈಗಾಗಲೇ 6 ಆರೋಪಿಗಳು ಸಾವನ್ನಪ್ಪಿದ್ದು, ಉಳಿದ 21 ಮಂದಿ ಆರೋಪಿಗಳು ದೋಷಿ ಎಂದು ಬುಧವಾರ ನ್ಯಾಯಾಲಯ ಆದೇಶಿಸಿತ್ತು. ಗುರುವಾರ ನ್ಯಾಯಾಲಯ 21 ಮಂದಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದು, ಒಟ್ಟು 2,83,500 ರೂ. ದಂಡ ವಿಧಿಸಿದೆ. ಅಂದರೆ ತಲಾ ಒಬ್ಬರಿಗೆ 13,500 ದಂಡ ವಿಧಿಸಿದೆ.
ಒಟ್ಟು 21 ದೋಷಿಗಳ ಪೈಕಿ ಇಬ್ಬರು ಮಹಿಳೆಯರು, 19 ಜನ ಪುರುಷರಿದ್ದಾರೆ. ಆಗಿನ ಡಿವೈಎಸ್ಪಿ ಶಿವರುದ್ರಸ್ವಾಮಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ತುಮಕೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ನಾಗಿರೆಡ್ಡಿ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದ್ದಾರೆ.
ರಂಗನಾಥ, ಮಂಜುಳ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ (ಗಂಗಣ್ಣ), ನಂಜುಂಡಯ್ಯ (ಪರಿಶಿಷ್ಟ ಜಾತಿ), ಸತ್ಯಪ್ಪ– ಸತೀಶ (ಪರಿಶಿಷ್ಟ ಜಾತಿ), ಚಂದ್ರಶೇಖರ (ಚಂದ್ರಯ್ಯ), ರಂಗಯ್ಯ (ರಾಮಯ್ಯ), ಉಮೇಶ್, ಚನ್ನಮ್ಮ, ಮಂಜಣ್ಣ, ಮಂಜು, ಸ್ವಾಮಿ (ಮೋಹನ್ ಕುಮಾರ್)
ಅಪರಾಧಿಗಳು ಎಂದು ಜೀವಾವಧಿ ಶಿಕ್ಷೆ ನೀಡಲಾಗಿದೆ. ಹನುಮಂತಯ್ಯ (ಪರಿಶಿಷ್ಟ ಜಾತಿ), ವೆಂಕಟೇಶ್, ರಾಮಯ್ಯ, ದಾಸಪ್ಪ, ರಾಮಯ್ಯ, ಬುಳ್ಳೆ ಹನುಮಂತಯ್ಯ ಈಗಾಗಲೇ ಮೃತಪಟ್ಟಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2010ರ ಜೂನ್ 28ರಂದು ಹೊನ್ನಮ್ಮ ಎಂಬ ದಲಿತ ಮಹಿಳೆಯ ಕೊಲೆ ನಡೆದಿತ್ತು. ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಡಾಬಾ ಹೊನ್ನಮ್ಮ ಎಂದೇ ಗುರುತಿಸಿಕೊಂಡಿದ್ದರು. ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಹೊನ್ನಮ್ಮ ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಈ ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಹೀಗಾಗಿ ಮರದ ತುಂಡು ಕಳುವಾಗಿದೆ ಎಂದು ಈ ಸಂಬಂಧ ಪೊಲೀಸ್ ಠಾಣೆಗೆ ಹೊನ್ನಮ್ಮ ದೂರು ನೀಡಿದ್ದರು. ಇದರಿಂದ ಗ್ರಾಮಸ್ಥರು ಹಾಗೂ ಹೊನ್ನಮ್ಮ ಮಧ್ಯೆ ದ್ವೇಷ ಉಂಟಾಗಿ ಜಗಳ ನಡೆಯುತ್ತಿತ್ತು.
ದೂರು ದಾಖಲಾದ ಬಳಿಕ ಇದರಿಂದ ಕುಪಿತವಾದ ಆರೋಪಿಗಳು 2010 ರ ಜೂನ್ 28 ರಂದು ಸಂಜೆ 7.30ರ ವೇಳೆಯಲ್ಲಿ ಹೊನ್ನಮ್ಮನನ್ನು ಕೊಲೆ ಮಾಡಿದ್ದರು. ಹೊನ್ನಮ್ಮ ಗೋಪಾಲಪುರದ ಕಾಯಿನ್ ಬೂತ್ ನಲ್ಲಿ ಕರೆ ಮಾಡಲು ಹೋಗುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿ ಕೈಗಳಿಂದ ಹೊಡೆದು ಮಾದಗಿತ್ತಿ ಎಂದು ಜಾತಿನಿಂದನೆ ಮಾಡಿ ಅಶ್ಲೀಲವಾಗಿ ಬೈದು, ಕೈ ಕಾಲುಗಳಿಂದ ಒದ್ದು ಸೈಜುಗಲ್ಲು ಎತ್ತಿಹಾಕಿದ್ದರು. ನಂತರ ಚರಂಡಿ ಬಾಕ್ಸ್ ನಲ್ಲಿ ಹಾಕಿ ಆಕೆ ಮೇಲೆ ಮತ್ತೆ ಕಲ್ಲುಗಳನ್ನು ಎತ್ತಿಹಾಕಿ ಕೊಲೆ ಮಾಡಿದ್ದರು.
ಈ ಪ್ರಕರಣದಲ್ಲಿ ಹಂದನಕೆರೆ ಪೊಲೀಸ್ ಠಾಣೆಯಲ್ಲಿ 27 ಜನರ ಮೇಲೆ ಜಾತಿನಿಂದನೆ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು.