ತುಮಕೂರು: ಕಲುಷಿತ ನೀರು ಕುಡಿದು ಸೋರಲಮಾವು ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಶಂಕೆ ವ್ಯಕ್ತವಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲಮಾವು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವಾಂತಿ ಭೇದಿಗೆ ವೃದ್ದೆ ಗುಂಡಮ್ಮ ಮೃತ ಪಟ್ಟಿದ್ದಾರೆ. ಮತ್ತಷ್ಟು ಸಾವು ಹೆಚ್ಚಾಗುವ ಸಾಧ್ಯತೆಯಿದ್ದು, ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೂ ಪಿಡಿಒ ತಲೆ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ವೃದ್ಧೆ ನಂತರ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಬಾಲಕಿ ಸಹ ಸಾವನ್ನಪ್ಪಿದ್ದಾಳೆ. ಭುವನೇಶ್ವರಿ (15) ಸಾವನ್ನಪ್ಪಿದ ಬಾಲಕಿ ಎಂದು ತಿಳಿದುಬಂದಿದೆ.
ಸಾವಿನ ಸಂಖ್ಯೆಯನ್ನ ಜಿಲ್ಲಾಡಳಿತ ಮುಚ್ಚಿಡುತ್ತಿದೆ ಎಂಬ ಅನುಮಾನದ ಹೊಗೆಯೂ ದಟ್ಟವಾಗಿದೆ. ಇದರ ನಡುವೆ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಮೂವರನ್ನ ದಾಖಲು ಮಾಡಲಾಗಿದೆ.
ಗ್ರಾಮದ ಹನುಮಂತಯ್ಯ, ನರಸಿಂಹಯ್ಯ, ಶಿವು ತೀರ ಅಸ್ವಸ್ಥತರಾಗಿದ್ದಾರೆ. ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕಂ ಹೂಡಿದ್ದಾರೆ. ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ