ತುಮಕೂರು || ವಾಂತಿ ಭೇದಿ : ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಮುಂದುವರಿದ ಚಿಕಿತ್ಸೆ

ತುಮಕೂರು || ವಾಂತಿ ಭೇದಿ : ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಮುಂದುವರಿದ ಚಿಕಿತ್ಸೆ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲು ಮಾವು ಗ್ರಾಮದಲ್ಲಿ ವಾಂತಿ ಭೇದಿಯಿಂದ ಇಬ್ಬರು ಮೃತಪಟ್ಟಿದ್ದು, ಕಲುಷಿತ ನೀರು ಸೇವನೆಯ ಶಂಕೆ ವ್ಯಕ್ತವಾಗಿದೆ. ಗುಂಡಮ್ಮ (60) ಮತ್ತು ಭುವನೇಶ್ವರಿ (10) ಮೃತ ದುರ್ದೈವಿಗಳಾಗಿದ್ದಾರೆ.

ಗ್ರಾಮದ ಗುಂಡಮ್ಮ ವಾಂತಿ ಭೇದಿಯಿಂದ ಮಂಗಳವಾರ ಮನೆಯಲ್ಲಿ ಮೃತಪಟ್ಟಿದ್ದಾರೆ. ಭಾನುವಾರ ಬಾಲಕಿಯೋರ್ವಳು ಮೃತಪಟ್ಟಿದ್ದಳು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಖಚಿತಪಡಿಸಿದ್ದಾರೆ. ರತ್ನಮ್ಮ ಎಂಬ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದು, ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಕಳುಹಿಸಲಾಗಿದೆ.

ಇನ್ನು ರೇಣುಕಯ್ಯ, ನೇತ್ರಾವತಿ, ರತ್ನಮ್ಮ, ಬಸವರಾಜು, ಉಮೇಶ್, ಶ್ರೀಧರ್, ರುದ್ರಮ್ಮ ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು, ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ಚಂದ್ರಶೇಖರ್ ಅವರು, “ಸೋರಲು ಮಾವು ಗ್ರಾಮದಲ್ಲಿ ಕಳೆದ ಎರಡು ದಿನಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಇಬ್ಬರಿಗೆ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಎಂಟು ಮಂದಿಗ ವಾಂತಿ ಭೇದಿಯಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಗ್ರಾಮಕ್ಕೆ ತಾಲೂಕು ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿ ಪೂರಕವಾದ ಚಿಕಿತ್ಸೆ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳಿದರು

Leave a Reply

Your email address will not be published. Required fields are marked *