ತುಮಕೂರು!!*ಲಂಚಕ್ಕೆ ಬೇಡಿಕೆ: ಪಿಡಿಒಗೆ ಮೂರು ವರ್ಷ ಜೈಲು ಶಿಕ್ಷೆ

ತುಮಕೂರು!!*ಲಂಚಕ್ಕೆ ಬೇಡಿಕೆ: ಪಿಡಿಒಗೆ ಮೂರು ವರ್ಷ ಜೈಲು ಶಿಕ್ಷೆ

ತುಮಕೂರು:– ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳಕಟ್ಟೆ‌ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್. ನಾಗರಾಜುಗೆ ಮೂರು ವರ್ಷ ಕಠಿಣ ಕಾರಾಗೃಹ, ಹತ್ತು ಸಾವಿರ ದಂಡ, ದಂಡ ಕಟ್ಟಲು ವಿಫಲವಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ತೀರ್ಪು ನೀಡಿದ್ದಾರೆ.

ತಾಲೂಕಿನ  ಹೊಯ್ಸಳಕಟ್ಟೆ ಗ್ರಾಮದ ವಾಸಿ  ಮಧು ಹೆಚ್.ಇ ಅವರ ತಾಯಿ ಮಲ್ಲಮ್ಮ ಅವರ ಹೆಸರಿನಲ್ಲಿದ್ದ ನಿವೇಶನದ ಇ-ಸ್ವತ್ತು ಮಾಡಿಕೊಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರಾಜು ಮಧು ಹೆಚ್. ಇ ಅವರಿಗೆ 2150 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.  ಲಂಚ‌ ಕೊಡಲು ಇಷ್ಟವಿಲ್ಲದೆ ದೂರುದಾರರಾದ ಮಧು ಹೆಚ್. ಇ ಅವರು 2021ರ ಸೆಪ್ಟೆಂಬರ್ 7ರಂದು ತುಮಕೂರು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ್ ಚುಕ್ಕಿ ಅವರು ಪ್ರಕರಣ ದಾಖಲಿಸಿಕೊಂಡು ಪೊಲೀಸ್ ನಿರೀಕ್ಷಕರಾದ ಎಸ್. ವಿಜಯಲಕ್ಷ್ಮಿ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು  2021ರ ಸೆಪ್ಟೆಂಬರ್ 8ರಂದು  ಅಧಿಕಾರಿ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 24ರಂದು ಅಧಿಕಾರಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಲೋಕಾಯುಕ್ತದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಆರ್.ಪಿ. ಪ್ರಕಾಶ್ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *