ತುರುವೇಕೆರೆ || ಬಗರ್ ಹುಕುಂ ಭೂಮಿ ನೀಡಲು ಮೀನಾಮೇಷ : ಆರೋಪ

ತುರುವೇಕೆರೆ || ಬಗರ್ ಹುಕುಂ ಭೂಮಿ ನೀಡಲು ಮೀನಾಮೇಷ : ಆರೋಪ

ತುರುವೇಕೆರೆ: ಕಾರ್ಪೊರೇಟ್ ಕಂಪನಿಗಳಿಗೆ ಸಾವಿರಾರು ಹೆಕ್ಟೇರ್ ಕಡಿಮೆ ಬೆಲೆಗೆ ಭೂಮಿ ನೀಡುವ ಸರ್ಕಾರಗಳು ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ಭೂಮಿ ಮಂಜೂರು ಮಾಡಿಕೊಡಲು ಮೀನಾ ಮೇಷ ಏಣಿಸುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಆರೋಪಿಸಿದರು.

ಅವರು ತಾಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ತಾಲೂಕು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

 ಬಗರ್ ಹುಕುಂ ಸಾಗುವಳಿಯ ಸಕ್ರಮ ಚೀಟಿಗಳು ಸಿಕ್ಕಿದರೂ ರೈತರ ಸ್ವಾಧೀನದಲ್ಲಿದ್ದರೂ ಕಂದಾಯ ಇಲಾಖೆ ಪಹಣಿ ಇತ್ಯಾದಿ ದಾಖಲಾತಿಯಲ್ಲಿ ಅರಣ್ಯ ಭೂಮಿ, ಗೋಮಾಳ, ಗೈರಾಣು ಭೂಮಿ, ಅಮೃತ ಕಾವಲ್, ಕುದುರೆ ಕಾವಲ್, ಈಚಲ ವನ, ಹುಲ್ಲು ಗಾವಲು ಎಂದು ಪಹಣಿಯಲ್ಲಿ ಇತ್ತೀಚೆಗೆ  ದಾಖಲು ಮಾಡಿದೆ. ಈ ಕಾರಣದಿಂದ ರೈತರಿಗೆ ಭೂಮಿಯನ್ನು ಸಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಸಾವಿರಾರು ರೈತರ ಜೀವನದ ಪ್ರಶ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಮಾತನಾಡಿ, ಬಡ ಕೂಲಿ ಕಾರ್ಮಿಕರು, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಜನರು ಸುಮಾರು ೪೦-೫೦ ವರ್ಷಗಳಿಂದ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಕೊಳವೆ ಬಾವಿ ತೆಗೆÀಸಿ ವಿದ್ಯುತ್ ಸಂಪರ್ಕ ಪಡೆದು ಬಗರ್‌ಹುಕುಂ ಸಾಗುವಳಿಯಲ್ಲಿ ತೋಟಗಳನ್ನು ಮಾಡಿಕೊಂಡು ಕೃಷಿ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೆ ದೊಡ್ಡ ಕಂಪನಿಗಳಿಗೆ ಭೂಮಿ ನೀಡುವುದನ್ನು ನಿಲ್ಲಿಸಿ, ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮಾಡಿ ಬಗರ್ ಹುಕುಂನಲ್ಲಿ ಸಾಗುವಳಿ ಮಾಡಿದ ರೈತರಿಗೆ ಭೂಮಿಯನ್ನು ಸಕ್ರಮ ಮಾಡಿಕೊಡಬೇಕು.

 ಪ್ರತಿಭಟನೆಯ ನಂತರ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ್ ಎ.ಎನ್ ಕುಂಞ ಅಹಮದ್‌ಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಅಜ್ಜಪ್ಪ, ಜಿಲ್ಲಾ ಉಪಾಧ್ಯಕ್ಷೆ ರಾಜಮ್ಮ, ತಾಲೂಕು ಅಧ್ಯಕ್ಷ ಭೋಜರಾಜು, ತಾಲೂಕು ಕಾರ್ಯದರ್ಶಿ ಪ್ರಕಾಶ್, ಸಹ ಕಾರ್ಯದರ್ಶಿ ಪರಮೇಶ್, ಮುಖಂಡರಾದ ನಾಗರಾಜು, ಬಾಣಸಂದ್ರ ಮುರಳಿ, ಪುಷ್ಪ, ನಾಗರತ್ನಮ್ಮ ಹಾಗೂ ನೂರಾರು ಸಾಗುವಳಿ ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *