ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ನೀರಗುಂದ, ಅಜ್ಜೇನಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೀರಗುಂದ, ಅಜ್ಜೇನಹಳ್ಳಿ ಗ್ರಾಮಸ್ಥರು ಕೆರೆ ಕೋಡಿಯಲ್ಲಿ ಪ್ರತಿಭಟನೆ ನಡೆಸಿದರು.
ಅರ್ಚಕ ಮಹಾಲಿಂಗಯ್ಯ, ರಸ್ತೆಯ ಮಧ್ಯೆ ನೀರು ತುಂಬಿರುವ ಕಾರಣ ಮತ್ತು ಗುಂಡಿಗಳು ಇರುವ ಕಾರಣಕ್ಕೆ ದ್ವಿಚಕ್ರ ವಾಹನಗಳು ಓಡಾಡಲು ಕಷ್ಟವಾಗಿದೆ. ರಸ್ತೆ ಮಧ್ಯೆ ಹಾಕಿರುವ ಚಪ್ಪಡಿ ಕಲ್ಲುಗಳು ಒಡೆದು ಹೋಗಿರುವುದರಿಂದ ವಾಹನಗಳನ್ನು ಸರಾಗವಾಗಿ ಚಾಲನೆ ಮಾಡಲು ಅಸಾಧ್ಯವಾಗಿದೆ. ಇನ್ನು ನಡೆದಾಡಿಕೊಂಡು ಹೋಗುವವರ ಸ್ಥಿತಿಯಂತೂ ಕೇಳುವ ಹಾಗೇ ಇಲ್ಲ. ನಾನೇ ಬಿದ್ದು 16 ಹೊಲಿಗೆ ಹಾಕಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ನೀರಗುಂದ, ಅಜ್ಜೇನಹಳ್ಳಿ ಗ್ರಾಮಸ್ಥರು ಮಾತನಾಡಿ, ನೀರಗುಂದ, ಅಜ್ಜೇನಹಳ್ಳಿ, ಗೊಲ್ಲರಹಟ್ಟಿ, ಸೋಮಲಾಪುರ, ಅರಳಗುಪ್ಪೆ, ಎ.ಹೊಸಹಳ್ಳಿ, ವೆಂಕಟಾಪುರ, ಮುದ್ಲಾಪುರ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಚರಿಸಲು ತೊಂದರೆಯಾಗಿದೆ. ಶಾಲಾಮಕ್ಕಳಿಗೆ ತೊಂದರೆಯಾಗಿದೆ. ರಸ್ತೆ ಮತ್ತು ಸೇತುವೆ ಮಾಡಲು ಎರಡು ಮೂರು ಬಾರಿ ಭೂಮಿ ಪೂಜೆ ಮಾಡಲಾಗಿದ್ದರೂ ಸಹಾ ಇನ್ನೂ ಕಾಮಗಾರಿಗೆ ಹಸಿರು ನಿಶಾನೆ ಸಿಕ್ಕಿಲ್ಲ. ಸಮಸ್ಯೆ ಗೊತ್ತಿದ್ದೂ ಸಹ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಶೀಘ್ರವೇ ಸಂಬOಧಿಸಿದವರು ಸಮಸ್ಯೆ ಬಗೆಹರಿಸದಿದ್ದರೆ ಆಜುಬಾಜಿನ ಹತ್ತಾರು ಗ್ರಾಮಸ್ಥರು ಸೇರಿ ಜನರಿಂದ ತುರುವೇಕೆರೆಯಿಂದ ಕೆಬಿ ಕ್ರಾಸ್ ಕಡೆ ತೆರಳುವ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ಸೇತುವೆಯಿಲ್ಲದೆ ಐದಾರು ಕಿಮೀ ಬಳಸಿ ಓಡಾಡುವ ದುಸ್ಥಿತಿ : ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಅಲ್ಲಪ್ಪ ಮಾತನಾಡಿ, ಹತ್ತಾರು ವರ್ಷಗಳಿಂದ ರಸ್ತೆ ದುರಸ್ತಿಪಡಿಸಿ, ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಬಾರಿ ಶಾಸಕರಿಗೂ, ಅಧಿಕಾರಿಗಳಿಗೂ ಮನವಿ ಮಾಡಿಕೊಂಡರೂ ಪ್ರಯೋಜವಿಲ್ಲದಂತಾಗಿದೆ. ಜನರು ಓಡಾಡಲೂ ಕಷ್ಟವಾಗುತ್ತಿದೆ. ನೀರಿನಿಂದ ರಸ್ತೆಯ ಗುಂಡಿಗಳು ತುಂಬಿ ದ್ವಿಚಕ್ರ ವಾಹನಗಳು ಗುಂಡಿಗಿಳಿದು ಅನೇಕ ಅಪಘಾತಗಳು ನಡೆದಿವೆ. ಮಳೆಗಾಲದಲ್ಲಂತೂ ಇಲ್ಲಿ ಓಡಾಡುವುದು ಬಹಳ ಕಷ್ಟ. ಕೆಲವೇ ಅಂತರ ದೂರ ಕ್ರಮಿಸುವ ಮುಖ್ಯರಸ್ತೆಗೆ ಕೋಡಿ ಸರಿಯಿಲ್ಲದ ಕಾರಣ ಅಜ್ಜೇನಹಳ್ಳಿ, ಕೋಲ್ಘಟ್ಟ, ಮಾವಿನಹಳ್ಳಿ ಸುತ್ತಿಕೊಂಡು ಸುಮಾರು ಐದು ಕಿಮೀ ದೂರ ಬಳಸಿಕೋಡು ಬರಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಲಿಂಗಪ್ಪ, ಚಂದ್ರಪ್ಪ, ಕಾಂತರಾಜು, ಶಿವಮ್ಮ, ವೀರುಪಾಕ್ಷ , ಶಿವಯ್ಯ, ಶಂಕರಪ್ಪ, ನಟರಾಜ್, ಮೋಹನ್ ಕುಮಾರ್, ಓಂಶಿವಯ್ಯ, ರಮೇಶ್, ಚರಣ್, ಪಟೇಲ್ ದಯಾನಂದ್ ಸೇರಿದಂತೆ ನೀರಗುಂದ ಹಾಗೂ ಅಜ್ಜೇನಹಳ್ಳಿ ಗ್ರಾಮದ ಹಲವಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.