ಉಡುಪಿ : ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಗುರುವಾರ (ಏಪ್ರಿಲ್ 3)ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಂಧು-ಮಿತ್ರರೊಂದಿಗೆ ಆಗಮಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಶ್ರೀ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮಾರಿಯಮ್ಮನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ನೂತನವಾಗಿ ನಿರ್ಮಾಣವಾದ ಶ್ರೀ ಹೊಸ ಮಾರಿಗುಡಿ ದೇಗುಲವನ್ನು ವೀಕ್ಷಿಸಿ, ದೇವಳದ ಶಿಲ್ಪಕಲಾ ವೈಭವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾರಿಗುಡಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ನವದುರ್ಗಾ ಲೇಖನದ ಮಾಹಿತಿ ಪಡೆದುಕೊಂಡ ಅಶ್ವಿನಿ ಅವರು ತಾವು ಕೂಡ ಲೇಖನ ಬರೆಯುವುದಾಗಿ ಸಂಕಲ್ಪ ಸ್ವೀಕರಿಸಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಮಾರಿಯಮ್ಮನಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ದೇವಾಲಯ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮನೋಹರ್ ರಾವ್ ಕಲ್ಯಾ, ರವೀಂದ್ರ ಮಲ್ಲಾರ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಹಾಗೂ ಚರಿತಾ ದೇವಾಡಿಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರು ದೇವಸ್ಥಾನದ ವಿಶೇಷತೆಗಳ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ತಿಳಿಸಿ ದೇವಸ್ಥಾನದ ವತಿಯಿಂದ ಗೌರವಿಸಿದರು.