ತುಮಕೂರು : ತಿಪಟೂರು ನಗರಕ್ಕೆ ಬರುವ ಮುಖ್ಯ ಪ್ರವೇಶ ರಸ್ತೆ (ತುಮಕೂರು ಭಾಗದಿಂದ ಹಾಗೂ ತುರವೇಕೆರೆ ಕಡೆಯಿಂದ) ತುಂಬಾ ಕಿರಿದಾಗಿದೆ. ವಾಹನ ಸವಾರರು ಹರಸಾಹಸ ಪಡಬೇಕಾದ ಸ್ಥಿತಿ ಇದೆ.
ಕಳೆದ ಹಲವು ವರ್ಷಗಳಿಂದಲೂ ತಿಪಟೂರು ನಗರಕ್ಕೆ ಪ್ರವೇಶ ಪಡೆಯುವ ರಸ್ತೆ ಕಿರಿದಾಗಿದೆ. ವಾಹನ ಚಾಲನೆ ತುಸು ಕಷ್ಟವೇ.ಪಕ್ಕದಲ್ಲಿಯೇ ಅಮಾನಿಕೆರೆ ಇರುವ ಕಾರಣದಿಂದ ಬ್ರಿಡ್ಜ್ ನಿರ್ಮಾಣ ಮಾಡಿ ರಸ್ತೆ ಅದರ ಮೇಲೆ ನಿರ್ಮಿಸಲಾಗಿದೆ. ಬೃಹದಾಕಾರವಾಗಿ ಬೆಳೆಯುತ್ತಿರುವ ನಗರಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಸ್ತೆ ವಿಸ್ತರಣೆ ಮಾಡುವ ಅವಶ್ಯ ಇದೆ.
ನೀಲಕಂಠಸ್ವಾಮಿ ವೃತ್ತದಿಂದ ತುಮಕೂರು, ತುರುವೇಕೆರೆ, ತಿಪಟೂರು ನಗರದ ಕೋಟೆ ಭಾಗಕ್ಕೆ ತಿಪಟೂರು ನಗರದ ಒಳಭಾಗಕ್ಕೆ ಸಂಪರ್ಕಿಸುವ ರಸ್ತೆಯನ್ನು ಈ ವೃತ್ತ ಹೊಂದಿದೆ. ಪ್ರತಿನಿತ್ಯ ತಿಪಟೂರು ಮೂಲಕ ಬೆಂಗಳೂರಿಗೆ ತೆರಳಲು ನೀಲಕಂಠಸ್ವಾಮಿ ಸರ್ಕಲ್ ಮೂಲಕ ತುಮಕೂರು ಹಾಗೂ ತುರವೇಕೆರೆ ಮಾರ್ಗವಾಗಿ ತೆರಳಬೇಕಾಗಿದೆ. ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ನಗರಕ್ಕೆ ಬರುವ ವಾಹನಗಳು ಒಂದಕ್ಕೂಂದು ಎದುರುಗಾಗುತ್ತವೆ. ಈ ಸ್ಥಳದಲ್ಲಿ ಪ್ರತಿನಿತ್ಯ ಅಪಘಾತ ನಡೆಯುತ್ತಿವೆ.ನಗರಕ್ಕೆ ಪ್ರವೇಶವಾಗುವ ಸ್ಥಳದಲ್ಲಿ ರಸ್ತೆ ಮಧ್ಯೆದಲ್ಲಿ ಮಂಟಪ ನಿರ್ಮಾಣ ಕಾಮಗಾರಿಯನ್ನು ಸುಮಾರು ಎರಡೂವೆರೆ ವರ್ಷಗಳಿಂದ ನಡೆಯುತ್ತಿದ್ದು ಪ್ರಗತಿಯಲ್ಲಿದೆ. ಮಂಟಪದ ಕಲ್ಲಿನ ಶಿಲೆ ಹಾಗೆಯೇ ಉಳಿದಿದೆ.
ಅಮಾನಿಕೆರೆ ಕೋಡಿ ಕೂಡ ಕಿರಿದಾದ ಬ್ರಿಡ್ಜ್ ಕೆಳಗೆ ನೀರು ಹರಿದು ಹೋಗಬೇಕಾಗಿದೆ. ಬ್ರಿಡ್ಜ್ ಮೇಲ್ಭಾಗದಲ್ಲಿನ ರಸ್ತೆಯಲ್ಲಿ ಒಂದು ವಾಹನ ಚಲಿಸಿದರೆ ಮತ್ತೊಂದು ವಾಹನಕ್ಕೆ ಅವಕಾಶವಿಲ್ಲದಂತೆ ಆಗಿದೆ. ತುರವೇಕೆರೆ ಭಾಗದ ಕಡೆಯೂ ಇಂತಹ ಪರಿಸ್ಥಿತಿಯೇ ಇದೆ.
ತಿಪಟೂರಿನ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಗೆ ವಾಹನ ತೆರಳುವಾಗ ಇಲ್ಲಿನ ಸಂಚಾರ ಕಷ್ಟಕರವಾಗಿದೆ. ದೊಡ್ಡ ವಾಹನಗಳು ಸಂಚಾರ ಮಾಡಿದಾಗ ಇಲ್ಲಿನ ಮರದ ಕೊಂಬೆಗಳಿಗೆ ತಗುಲಿ ಬಸ್ಗಾಗಿ ಕಾದು ನಿಂತಿರುವ ಪ್ರಯಾಣಿಕರ ಮೇಲೆ ಬಿದ್ದಿರುವ ಪ್ರಕರಣ ಇದೆ.ಆದರೆ, ಇಲ್ಲಿನ ಸರ್ಕಲ್ನಲ್ಲಿ ಪ್ರಯಾಣಿಕರಿಗೆ ಆಗಲಿ, ವಾಹನ ಸಂಚಾರಕ್ಕಾಗಲೀ ಯಾವುದೇ ಸೂಚನಾ ಫಲಕ ಇಲ್ಲ. ಎರಡು ಕಡೆಗೂ ತೆರಳುವ ಪ್ರಯಾಣಿಕರಿಗೆ ತಂಗುದಾಣದ ವ್ಯವಸ್ಥೆಇಲ್ಲ.
ನೀಲಕಂಠಸ್ವಾಮಿ ವೃತ್ತದ ಸುತ್ತಾ ಗೊಡ್ಸ್ ವಾಹನ, ಆಟೊ ನಿಲ್ಲುತ್ತಿವೆ. ಬೆಂಗಳೂರಿನಿಂದ ಬರುವ ಬಸ್ಗಳು ಯಾವುದೇ ನಿಲ್ದಾಣವಿಲ್ಲದೆ ಇದ್ದರೂ ಬಸ್ ನಿಲುಗಡೆಯಿಂದ ವಾಹನಕ್ಕೆ ಅಡಚಣೆಯಾಗಿದೆ. ವೃತ್ತದ ಸಮೀಪದಲ್ಲಿರುವ ರೈಲ್ವೆ ಮೇಲ್ಸೇತುವೆಗೆ ಸರಕು ತುಂಬಿಕೊಂಡು ಬರುವ ವಾಹನಗಳು ಒಮ್ಮೊಮ್ಮೆ ಸಿಕ್ಕಿ ಹಾಕಿಕೊಂಡು ಗಂಟೆಗಟ್ಟಲೇ ವಾಹನ ದಟ್ಟಣೆ ಸಂಭವಿಸುತ್ತಿದೆ. ಜೋರಾದ ಮಳೆ ಬಂದರೆ ರೈಲ್ವೆ ಮೇಲ್ಸೇತುವೆಯಡಿ ನೀರು ತುಂಬಿ ದ್ವಿಚಕ್ರ ವಾಹನಗಳ ಎಂಜಿನ್ ಒಳಗೆ ನೀರು ತುಂಬಿ ಕೆಟ್ಟು ನಿಂತ ಪ್ರಸಂಗವೂ ನಡೆಯುತ್ತಿವೆ.
ಇತಿಹಾಸ ಪ್ರಸಿದ್ಧ ತಿಪಟೂರು ಕೆಂಪಮ್ಮ ದೇವಿ ದೇವಾಸ್ಥಾನ ಹಾಗೂ ಕಲ್ಲೇಶ್ವರಸ್ವಾಮಿ ದೇವಾಲಯ, ಕೋಟೆ ಆಂಜನೇಯಸ್ವಾಮಿ ದೇವಾಲಯ, ಕಾಶಿ ವಿಶ್ವೇಶ್ವರ ದೇವಾಲಯವಿದೆ. ಇಲ್ಲಿಗೆ ಬರುವ ಭಕ್ತರಿಗೂ ಕಿರಿದಾದ ರಸ್ತೆಯಿಂದ ತೊಂದರೆಯಾಗುತ್ತಿದೆ. ತಾಲ್ಲೂಕಿನ ಯಾವುದೇ ಕಾರ್ಯಕ್ರಮದ ಮೆರವಣಿಗೆ,
ಪ್ರತಿಭಟನೆ ಸರ್ಕಾರಿ ಕಾರ್ಯಕ್ರಮ ಈ ನೀಲಕಂಠಸ್ವಾಮಿ ವೃತ್ತದಿಂದ ಆರಂಭಗೊಳ್ಳುತ್ತದೆ. ಆದರೆ, ಈ ವೃತ್ತದ ಆಸುಪಾಸಿನಲ್ಲಿರುವ ರಸ್ತೆ ಅಭಿವೃದ್ಧಿ ಇಲ್ಲಿನ ತಾಲ್ಲೂಕು ಆಡಳಿತ, ಯಾವುದೇ ಶಾಸಕರಗಾಲೀ, ನಗರಸಭೆ ಆಡಳಿತ, ಲೋಕೋಪಯೋಗಿ ಇಲಾಖೆ ಬಗ್ಗೆ ಗಮನಹರಿಸದೆ ಇರುವುದು ಶೋಚನೀಯ ಸಂಗತಿ ಎನ್ನುತ್ತಾರೆ ಸ್ಥಳೀಯರು.
ಪ್ರಸನ್ನಕುಮಾರ್ ಮಾಜಿ ನಗರಸಭೆ ಸದಸ್ಯ ಅಪಘಾತ ತಪ್ಪಿಸಲು ಲೋಕೋಪಯೋಗಿ ಇಲಾಖೆ ಸಂಬಂಧಪಟ್ಟ ಇಲಾಖೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಇಲ್ಲಿನ ಪ್ರವೇಶ ದ್ವಾರಕ್ಕೆ ಸ್ವಾಗತ ಕಮಾನು ಅವಶ್ಯ ಇದೆ ಡಾ.ಓಹಿಲಾ ಗಂಗಾಧರ್ ನಗರಸಭಾ ಸದಸ್ಯೆಇಲಾಖೆ ಅಧಿಕಾರಿಗಳು ಕೋಡಿ ಸರ್ಕಲ್ ಬಳಿ ಇರುವ ರಸ್ತೆಯನ್ನು ವಿಶಾಲ ರಸ್ತೆಯನ್ನಾಗಿ ಮಾರ್ಪಡಿಸಬೇಕು. ಅತಿ ಮುಖ್ಯವಾಗಿ ಆ ಭಾಗದಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಬೇಕು
ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ವೃತ್ತದ ಸೌಂದರ್ಯೀಕರಣಕ್ಕೆ ಕಾಮಗಾರಿ ಪ್ರಾರಂಭವಾಗಿ 2 ರಿಂದ 3 ವರ್ಷ ಕಳೆದರೂ ಅಂತಿಮವಾಗಿಲ್ಲ. ಆದರೆ ಕಳೆದ ವರ್ಷ ಬಸವೇಶ್ವರ ಪ್ರತಿಮೆಯನ್ನು ಬಸವಾನುಯಾಯಿಗಳು ಪ್ರತಿಷ್ಠಾಪಿಸಿದ್ದಾರೆ. ತಾಲ್ಲೂಕು ಆಡಳಿತ ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣ ತಿಳಿಸಿ ಬಸವ ಪುತ್ಥಳಿ ತೆರವುಗೊಳಿಸಿದ ಕಾರಣ ಈ ವೃತ್ತದಲ್ಲಿ ಪ್ರತಿಭಟನೆ ಮುಷ್ಕರ ಕೂಡ ನಡೆದಿತ್ತು.
ಕಾಮಗಾರಿ ಅರ್ಥಕ್ಕೆ ನಿಂತಿದ್ದು ರಾತ್ರಿ ವೇಳೆಯಲ್ಲಿ ಸಂಚಾರ ಮಾಡುವ ವಾಹನಗಳು ಮಂಟಪಕ್ಕೆ ಡಿಕ್ಕಿ ಹೊಡೆಯುತ್ತಿವೆ. ಈ ವೃತ್ತ ಶ್ರದ್ಧಾಂಜಲಿ ಹಾಗೂ ಜಾಹೀರಾತು ಫ್ಲೆಕ್ಸ್ ಅಳವಡಿಕೆ ಜಾಗವಾಗಿ ಮಾರ್ಪಾಡಾಗಿದೆ. ಶೀಘ್ರ ಇದರ ಅಭಿವೃದ್ಧಿ ಕಾರ್ಯ ತ್ವರಿತಗೊಳ್ಳಬೇಕಿದೆ.
ನಗರದ ಹೃದಯ ಭಾಗದಲ್ಲಿರುವ ನಗರಸಭೆ ವೃತ್ತದಲ್ಲೂ (ಪೈ ಹೋಟೇಲ್ ವೃತ್ತ) ಪ್ರತಿನಿತ್ಯ ಹಾಗೂ ಎರಡು ಗಂಟೆಕ್ಕೂಮ್ಮೆಯಾದರೂ ಯಾವುದರೂ ಒಂದು ಅಪಘಾತ ಸಂಭವಿಸುತ್ತಿದೆ. ಇಲ್ಲಿನ ವೃತ್ತ ಕೂಡ ಚಿಕ್ಕದಾಗಿದೆ. ಸಾರ್ವಜನಿಕರು ನಗರಸಭೆ ಕಚೇರಿ ರೈಲ್ವೆ ನಿಲ್ದಾಣಕ್ಕೆ ತೆರಳಲು ಪಕ್ಕದಲ್ಲಿರುವ ಕೆನರಾ ಬ್ಯಾಂಕ್ಗೆ ವ್ಯವಹಾರ ಮಾಡಲು ಸಾರ್ವಜನಿಕರು ಬರುತ್ತಾರೆ. ವೃತ್ತ ಹಾಗೂ ರಸ್ತೆ ಎರಡು ಭಾಗದಲ್ಲಿ ಚಿಕ್ಕ ಅಂಗಡಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ನಗರಸಭೆ ವೃತ್ತದ ಬಳಿ ಅಪಘಾತ ಸಂಖ್ಯೆ ಹೆಚ್ಚಳವಾಗಿದೆ ಎನ್ನುತ್ತಾರೆ ಸ್ಥಳೀಯರು.