ಬೆಂಗಳೂರು : ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳಿಗಾಗಿ ಅಗೆತ, ಶೋಧ ಮುಂದುವರಿದಿರುವಂತೆಯೇ ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ನಾನಾ ಭಾಗಗಳಲ್ಲಿ ಭೂಮಿಯನ್ನು ಅಗೆಸುತ್ತಿರುವ ಅನಾಮಿಕನ ಮಾತುಗಳ ಮೇಲೆ ಸಂಶಯ ಕ್ರಮೇಣ ಹೆಚ್ಚುತ್ತಿದೆ. ಸರ್ಕಾರ ರಚಿಸಿದ ಎಸ್ಐಟಿ ಅನಾಮಿಕ ಹೇಳಿದ ಕಡೆಯೆಲ್ಲ ಭೂಮಿಯನ್ನು ಆಗೆದು ಮಾನವ ಅವಶೇಷಗಳಿಗಾಗಿ ಹುಡುಕುವ ಪ್ರಯತ್ನ ನಡೆಸುತ್ತಿದೆ. ಕಳೆದ 15 ದಿನಗಳಿಗೂ ಹೆಚ್ಚು ಸಮಯದಿಂದ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಅಗೆಯುವ ಕೆಲಸ ನಡೆಯುತ್ತಿದೆ, 13 ಸ್ಥಳಗಳಲ್ಲಿ ಉತ್ಖನನ ನಡೆಸಿದರೂ ಎಲ್ಲೂ ಮಾನವ ದೇಹದ ಅವಶೇಷಗಳು ಸಿಕ್ಕಿಲ್ಲ.
ಅನಾಮಿಕ ಪ್ರತಿದಿನ ಒಂದೊಂದು ಹೊಸ ಜಾಗ ತೋರಿಸುತ್ತಾ ಹೋಗುತ್ತಿದ್ದಾನೆ. ಇದೇ ಹಿನ್ನೆಲೆಯಲ್ಲಿ ಅಗೆತ ಕೆಲಸ ನಿಲ್ಲಿಸಿ ಅನಾಮಿಕನ ಮೇಲೆ ಮಂಪರು ಪರೀಕ್ಷೆ ನಡೆಸಬೇಕಾ ಎಂಬ ಚರ್ಚೆಯೂ ನಡೆಯುತ್ತಿದೆ. ಎಸ್ಐಟಿ ಅಧಿಕಾರಿಗಳು ಇಂದು ಸಭೆಯೊಂದನ್ನು ನಡೆಸಲಿದ್ದು ಇದರಲ್ಲಿ ಪುತ್ತೂರಿನ ಅಸಿಸ್ಟಂಟ್ ಕಮೀಷನರ್ ಸ್ಟೆಲ್ಲ ವರ್ಗೀಸ್ ಕೂಡ ಭಾಗಿಯಾಗಲಿದ್ದಾರೆ.