ಹೆದ್ದಾರಿ ಕೆಲಸ ಚುರುಕಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಸೂಚನೆ

ಹೆದ್ದಾರಿ ಕೆಲಸ ಚುರುಕಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಸೂಚನೆ

ತುಮಕೂರು: ತುಮಕೂರು- ನೆಲಮಂಗಲ ಹೆದ್ದಾರಿ ಕಾಮಗಾರಿ ತೆವಳುತ್ತಾ ಸಾಗಿರುವುದಕ್ಕೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೆಲಮಂಗಲದಿಂದ ತುಮಕೂರು ವರೆಗೆ ಮಂಗಳವಾರ ಹೆದ್ದಾರಿಯಲ್ಲಿ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ನಡೆಸಿದರು.

ಸ್ಥಗಿತಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ಕೆಲಸ ಆರಂಭಿಸಬೇಕು, ಮುಂದಿನ ಎರಡು ವಾರದಲ್ಲಿ ಚುರುಕು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಕಾಮಗಾರಿ ವೇಗ ಪಡೆದುಕೊಳ್ಳದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಗುತ್ತಿಗೆದಾರರ ವಿರುದ್ಧವೂ ಚಾಟಿ ಬೀಸಿದರು. ಹಿರಿಯ ಅಧಿಕಾರಿಗಳಿಗೆ ದೂರವಾಣಿಯಲ್ಲಿ ಮಾತನಾಡಿ, ‘ಕಾಮಗಾರಿ ಮುಂದುವರಿಸಲು ಇರುವ ಅಡೆತಡೆ ನಿವಾರಣೆ ಮಾಡಬೇಕು. ಏನೇ ಸಮಸ್ಯೆಗಳಿದ್ದರೂ ನನ್ನ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದು ನಿರ್ದೇಶಿಸಿದರು.

ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವುದು, ಇದರಿಂದ ಸಮಸ್ಯೆ ಆಗುತ್ತಿರುವುದನ್ನು ಸ್ಥಳೀಯರು ಗಮನಕ್ಕೆ ತಂದರು. ಆಗ ಮತ್ತಷ್ಟು ಸಿಟ್ಟಾದ ಸಚಿವರು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಚಳಿ ಬಿಡಿಸಿದರು. ‘ಏನೇ ಸಮಸ್ಯೆಗಳಿದ್ದರೂ ಪರಿಹರಿಸಿಕೊಡಲಾಗುವುದು. ತಕ್ಷಣ ಕೆಲಸ ವೇಗ ಪಡೆದುಕೊಳ್ಳುವಂತೆ ಮಾಡಬೇಕು’ ಸೂಚಿಸಿದರು.

Leave a Reply

Your email address will not be published. Required fields are marked *