ಹುಬ್ಬಳ್ಳಿ: ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹುಬ್ಬಳ್ಳಿ ಹೊರವಲಯದ ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವಸ್ಥಾನದ ಬಳಿಯ ಬೈಪಾಸ್ನಲ್ಲಿ ಈ ಅವಘಡ ಸಂಭವಿಸಿದೆ. ಬೆಂಗಳೂರಿನ ಗೋಪಾಲಕೃಷ್ಣ ಉಪಾಧ್ಯಾಯ(೫೨) ಹಾಗೂ ಧಾರವಾಡದ ಸದಾನಂದ ದೇವಾಡಿಗ(೪೮) ಮೃತರು. ಮೃತ ಇಬ್ಬರೂ ವ್ಯಕ್ತಿಗಳ ಗುರುತು ಪತ್ತೆಯಾಗದ ರೀತಿಯಲ್ಲಿ ದೇಹಗಳು ಛಿದ್ರವಾಗಿ ಬಿದ್ದಿವೆ.
ಬೆಂಗಳೂರಿನ ಗೋಪಾಲಕೃಷ್ಣ ಉಪಾಧ್ಯಾಯ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕಾರನ್ನು ನಿಲ್ಲಿಸಿ ಪಂಡರಾಪುರಕ್ಕೆ ತೆರಳಿದ್ದರು. ದೇವರ ದರ್ಶನ ಪಡೆದು ಮಾರನೇ ದಿನ ಬೈಪಾಸ್ ರಮ್ಯ ರೆಸಿಡೆನ್ಸಿ ಬಳಿ ಬಸ್ ಇಳಿದುಕೊಂಡು ಧಾರವಾಡದ ಸದಾನಂದ ದೇವಾಡಿಗ ಅವರ ಸ್ಕೂಟಿಯ ಹತ್ತಿಕೊಂಡು ಹುಬ್ಬಳ್ಳಿ ಕಡೆ ಬರುತ್ತಿದ್ದರು. ಈ ವೇಳೆ, ಅಪರಿಚಿತ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಶೀಲನೆ ನಡೆಸಿದ ಉತ್ತರ ಸಂಚಾರಿ ಪೊಲೀಸರು, ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.