ಬೆಂಗಳೂರು: ಮಗುವಿಗೆ ಹಾಲುಣಿಸಲು ಸ್ಥಳವಕಾಶವಿಲ್ಲದೆ ತಾಯಿಯೊಬ್ಬಳು ಪರದಾಡಿದಂತಹ ಘಟನೆ ನಮ್ಮ ಮೆಟ್ರೋದ ನೇರಳೆ ಬಣ್ಣದ ಟ್ರಿನಿಟಿ ನಿಲ್ದಾಣದಲ್ಲಿ ನಡೆದಿದ್ದು, ಅದಾದ ಬಳಿಕ ಎಲ್ಲ ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ, ರೈಲ್ವೆ ನಿಲ್ದಾಣಗಳಲ್ಲಿ ಮಗುವಿಗೆ ಹಾಲುಣಿಸಲು ಕೇಂದ್ರವನ್ನು ಸ್ಥಾಪಿಸಬೇಕೆಂದು ಮಹಿಳಾ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಹಾಲುಣಿಸಲು ಸರಿಯಾದ ಸ್ಥಳವಕಾಶವಿಲ್ಲದೆ ಆ ತಾಯಿ, ಸುತ್ತಮುತ್ತ ಸ್ಥಳ ಹುಡುಕಿ ಬಳಿಕ ಪ್ಲಾಟ್ಫಾರ್ಮ್ ಬಳಿಯ ಮರೆಯಲ್ಲಿ ಹಾಲುಣಿಸಿದ್ದರು. ಆ ವೇಳೆ ಆಕೆಗೆ ಮಾವ ಹಾಗೂ ಗಂಡ ಸುತ್ತ ಕಾವಲು ನಿಂತಿದ್ದರು. ಈ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿತ್ತು. ಕೆಲ ಕೆಎಸ್ಆರ್ಟಿಸಿ, ರೈಲ್ವೆ ನಿಲ್ದಾಣಗಳಲ್ಲಿ ಹಾಲುಣಿಸುವ ಕೇಂದ್ರವಿದ್ದು, ಆದರೆ ನಮ್ಮ ಮೆಟ್ರೋದಲ್ಲಿ ಅಂತಹ ಸೌಲಭ್ಯವಿಲ್ಲದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
2017 ರಿಂದ ನಿರ್ಭಯ ಯೋಜನೆಯಡಿಯಲ್ಲಿ ಹಾಲುಣಿಸುವ ಕೇಂದ್ರವನ್ನು ಕೆಲ ಪ್ರಯಾಣಿಕ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ. ನಮ್ಮ ಮೆಟ್ರೋ ಅಧಿಕಾರಿಗಳ ಮಾಹಿತಿಯ ಪ್ರಕಾರ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ತಾಯಂದಿರ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇತರ ನಿಲ್ದಾಣಗಳಲ್ಲಿ ಸಹ ಇಂತಹ ಕೇಂದ್ರಗಳನ್ನು ಸ್ಥಾಪಿಸುವ ಕೆಲಸ ಶೀಘ್ರದಲ್ಲೇ ಕಾರ್ಯ ಪ್ರಗತಿ ಆರಂಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.