ವೈಯಾಲಿಕಾವಲ್ ಮಹಾಲಕ್ಷ್ಮಿ ಹತ್ಯೆ ಪ್ರಕರಣ : ಶಂಕಿತ ಆರೋಪಿ ಆತ್ಮಹತ್ಯೆ

ವೈಯಾಲಿಕಾವಲ್ ಮಹಾಲಕ್ಷ್ಮಿ ಹತ್ಯೆ ಪ್ರಕರಣ : ಶಂಕಿತ ಆರೋಪಿ ಆತ್ಮಹತ್ಯೆ

ಬೆಂಗಳೂರು: ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆ ಮಹಾಲಕ್ಷ್ಮಿಯ ಬರ್ಬರ ಹತ್ಯೆ ಪ್ರಕರಣದವು ಬೆಂಗಳೂರನ್ನೆ ಬೆಚ್ಚಿಬೀಳಿಸಿತ್ತು, ಈ ಕೃತ್ಯಕ್ಕೆ ಯಾರು ಕಾರಣರಾಗಿರಬಹುದು ಎಂದು ಸುಳಿವೂ ಸಿಕ್ಕಿರಲಿಲ್ಲ ನಂತರ ಸಿಸಿಟಿವಿ ಆಧಾರದ ಮೇಲೆ ವ್ಯಕ್ತಿಯ ಚಲನ ವಲನಗಳನ್ನು ಪೋಲೀಸರು ದೃಶ್ಯಾವಳಿಯಲ್ಲಿ ನೋಡಿ ಆರೋಪಿ ಪತ್ತೆಗೆ ಬಲೆ ಬೀಸಲಾಗಿತ್ತು, ಆದರೆ ಈಗ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಕ್ತಿ ರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಆರೋಪಿ ಎನ್ನಲಾಗಿದೆ. ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಮುಕ್ತಿ ರಂಜನ್ ರಾಯ್, ಒಡಿಶಾದ ತನ್ನ ಸ್ವಗ್ರಾಮ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಂದ್ರ ಬೆಂಗಳೂರು ಉಪ ಪೊಲೀಸ್ ಆಯುಕ್ತ ಶೇಖರ್ ಎಚ್ ತೆಕ್ಕಣ್ಣವರ್ ತಿಳಿಸಿದ್ದಾರೆ.

ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರು, ಆರೋಪಿಯ ಬಂಧನಕ್ಕೆ ಒಡಿಶಾ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸುತ್ತಿದ್ದು, ಈ ನಡುವೆ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮಿಯ ಹತ್ಯೆ ಬಳಿಕ ಬೆಂಗಳೂರಿನಿಂದ ಪರಾರಿಯಾಗಿದ್ದ ರಾಯ್, ಒಡಿಶಾದ ಭದ್ರಕ್ ಜಿಲ್ಲೆಯ ಸ್ಮಶಾನದ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆಯ ನಂತರ, ತನ್ನ ಸ್ವಗ್ರಾಮಕ್ಕೆ ಹಿಂದಿರುಗಿದ್ದ ಆರೋಪಿ, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಆತನ ಲ್ಯಾಪ್ಟಾಪ್ ಕೂಡ ಪತ್ತೆಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಧುಸುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಆತನ ಡೈರಿ ಮತ್ತು ಲ್ಯಾಪ್ಟಾಪ್ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಬೆಂಗಳೂರಿನ ಹೆಬ್ಬಗೋಡಿ ಪ್ರದೇಶದಲ್ಲಿ ವಾಸವಾಗಿದ್ದು, ಮಲ್ಲೇಶ್ವರಂನಲ್ಲಿರುವ ಫ್ಯಾಶನ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಮಹಾಲಕ್ಷ್ಮಿಯ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಬೆಳೆದಿತ್ತು. ಆದರೆ, ಮಹಾಲಕ್ಷ್ಮಿ ಮತ್ತೊಬ್ಬರೊಂದಿಗೆ ಸಲುಗೆಯಿಂದ ಮಾತನಾಡುತ್ತಿರುವುದಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಇದೇ ವಿಚಾರ ಆಕೆಯ ಕೊಲೆಗೆ ಕಾರಣವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *