ವಿಜಯಪುರ: ಗಾಂಧಿ ಚೌಕ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಎ.ಎಸ್ ಬಂದುಗೋಳ ಅವರ ಪತ್ನಿಗೆ 3ನೇ ಹೆರಿಗೆ ಆಗಿದೆ ಅಂತ ತಿಳಿದುಬಂದಿದೆ. ಆದ್ರೆ ಬಂದುಗೋಳ ಅವರಿಂದ ರಜೆಗಾಗಿ ಯಾವುದೇ ಮನವಿ ಬಂದಿಲ್ಲ. ಇಲಾಖಾ ಸಿಬ್ಬಂದಿ ಗ್ರೂಪ್ ನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದಾರೆ. ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.
ವಾಟ್ಸಪ್ ಸಂದೇಶದಲ್ಲಿ ಏನಿದೆ?
ಕಾನ್‌ಸ್ಟೇಬಲ್ ಪೋಸ್ಟ್‌ಗೆ ವಾಟ್ಸಪ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಠಾಣಾ ಬರಹಗಾರ ಸುನೀಲ್ ಮೋಳೆ, ಆತ್ಮೀಯ ಸಹೋದರ ಸಿಬ್ಬಂದಿ ವರ್ಗದವರೇ ಹಾಗೂ ಅಧಿಕಾರಿಗಳೇ, ನಮ್ಮ ಠಾಣೆಯ ಸಹೋದರ ಸಿಬ್ಬಂದಿ ಅಕ್ಬರ್ ಬಂದುಗೋಳ ಇವರ ಮಗನ ಅಕಾಲಿಕ ಮರಣದ ಬಗ್ಗೆ ಎಲ್ಲರಿಗೂ ಕೂಡ ತುಂಬಾ ಖೇದವಿದೆ. ಆ ದೇವರು ಬಂದೂಗೋಳ ಇವರಿಗೂ ಇವರ ಕುಟುಂಬದವರಿಗೆ ಆ ಮಗುವಿನ ಅಗಲಿಕೆಯ ದುಃಖದ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನಾನು ಗಾಂಧಿ ಚೌಕ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಾರ್ನೀಷಿ ಕೆಲಸವನ್ನು ಮಾಡುತ್ತಿದ್ದೇನೆ. ಸದರಿ ಸಹೋದರ ಸಿಬ್ಬಂದಿ ಬಂಧುಗೊಳ್ ಇವರು ನಮ್ಮ ಠಾಣೆಯಲ್ಲಿ ಜನರಲ್ ಡ್ಯೂಟಿ ಮಾಡುತ್ತಿದ್ದಾರೆ. ಇವರಿಗೆ ದಿನಾಂಕ 1.3.2025 ರಂದು ಬೆಳಗಾವಿ ಟಪಾಲ್ ಕರ್ತವ್ಯದ ಮೇಲೆ ಕಳುಹಿಸಲಾಗಿತ್ತು. ಅಲ್ಲಿಂದ ಮರಳಿ ಬರುವಾಗ ಅವರು ನಮ್ಮ ಠಾಣಾ ಬರಹಗಾರರಿಗೆ ಹಾಗೂ ನನಗೆ ಫೋನ್ ಮಾಡಿ ತನ್ನ ಮಗನಿಗೆ ಹುಷಾರಿರುವುದಿಲ್ಲ, ಆದ್ದರಿಂದ ತನಗೆ ಠಾಣೆಗೆ ಬರಲು ಆಗುವುದಿಲ್ಲ ಎಂದು ತಿಳಿಸಿದರು.
ಅದಕ್ಕೆ ನಾವು ಆಯ್ತು ನೀವು ಹೋಗಿ ನಿಮ್ಮ ಮಗನ ಬಗ್ಗೆ ಕಾಳಜಿ ವಹಿಸಿ ನಾವು ಡ್ಯೂಟಿ ಅಡ್ಡಸ್ಟ್ ಮಾಡುತ್ತೇವೆ ಎಂದು ಹೇಳಿದ್ದೆವು. ನಂತರ ನಾವು ನಿನ್ನೆ ಸಂಜೆ ಸದರಿ ಬಂದುಗೋಳ ಇವರಿಗೆ ಫೋನ್ ಮಾಡಿ ರೋಲಕಾಲಿಗೆ ಬಂದಿಲ್ಲವಲ್ಲ ಎಂದು ಕೇಳಿದ್ದೆವು. ಅದಕ್ಕೆ ಅವರು ನನ್ನ ಮಗನಿಗೆ ಹುಷಾರಿಲ್ಲ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ ಎಂದು ಹೇಳಿದರು. ಆಗ ನಾವು ಆಯ್ತು ನೀವು ಮಗನನ್ನು ನೋಡಿಕೊಳ್ಳಿ ನಾವು ಡ್ಯೂಟಿ ಅಡ್ಡಸ್ಟ್ ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ಠಾಣಾ ದಿನಚರಿಯಲ್ಲಿ ಅವರನ್ನು ಕರ್ತವ್ಯದ ಮೇಲೆ ಇರುವಂತೆ ತೋರಿಸಿರುತ್ತೇವೆ. ಇಲ್ಲಿಯವರೆಗೂ ಸಹ ಇವರು ಯಾವುದೇ ರಜಾ ಚೀಟಿಯನ್ನು ಯಾರಿಗೂ ಕೊಟ್ಟಿರುವುದಿಲ್ಲ. ಯಾರಿಗೂ ರಜೆಯನ್ನು ಕೇಳಿರುವುದಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸ್ ಕಾನ್‌ಸ್ಟೇಬಲ್ ಪೋಸ್ಟ್ ಏನಿತ್ತು?
ವಿಜಯಪುರ ನಗರದ ಗಾಂಧಿಔಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಆಗಿರುವ ಎ.ಎಸ್ ಬಂದುಗೊಳ ಅವರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. `ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ನನ್ನ ಮಗ ಉಳಿಯಲಿಲ್ಲ… ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು… ನನಗೆ ಬಹಳ ನೋವಾಗಿದೆ..’ ಅನ್ನೋ ಸಂದೇಶವನ್ನು ತನ್ನ ಮಗು ಐಸಿಯುನಲ್ಲಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದರು.
ಕಾನ್ಸ್ಟೇಬಲ್ ಎ.ಎಸ್ ಬಂದುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ಈ ರೀತಿ ಮೆಸೇಜ್ ಹಾಕಿದ್ದಾರೆ. ಇನ್ನೂ ಈ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಿಂದ ಟ್ಯಾಗ್ ಕೂಡ ಮಾಡಲಾಗಿತ್ತು.