ವಿಜಯಪುರ: ಹಿಂದುತ್ವದಿಂದ ದೂರ ಸರಿದಿರುವ ಬಿಜೆಪಿಯನ್ನು ಮತ್ತೆ ಹಿಂದುತ್ವಕ್ಕೆ ಮರಳಿ ತರುತ್ತೇವೆ. ಹೊಸ ಪಕ್ಷ ಕಟ್ಟುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷ ಹುಟ್ಟುಹಾಕುವ ಚಿಂತನೆಗಳಿವೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ನಾವು ಹೊಸ ಪಕ್ಷವನ್ನು ಕಟ್ಟುವುದಿಲ್ಲ. ಬದಲಿಗೆ ಹಿಂದುತ್ವದಿಂದ ದೂರ ಸರಿದಿರುವ ಬಿಜೆಪಿಯನ್ನು ಮತ್ತೆ ಹಿಂದುತ್ವಕ್ಕೆ ಮರಳಿ ತರುತ್ತೇವೆಂದು ಹೇಳಿದರು.
ಮಧ್ಯಪ್ರದೇಶ, ದೆಹಲಿ, ಆಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬರಲಿದೆ. ಹಿಂದುತ್ವದ ಪರ ಗಟ್ಟಿಯಾಗಿ ಮಾತನಾಡುವ ನಾಯಕರನ್ನು ಪಕ್ಷ ಗುರುತಿಸಬೇಕಿದೆ ಎಂದು ತಿಳಿಸಿದರು.
ನಮಗೆ ಪ್ರಧಾನಿ ಮೋದಿ, ಬಿಜೆಪಿ ಮೇಲೆ ವಿಶ್ವಾಸ ಇದೆಯೇ ಹೊರತು ಯಡಿಯೂರಪ್ಪ, ವಿಜಯೇಂದ್ರ ಮೇಲೆ ಇಲ್ಲ. ಯತ್ನಾಳ ಏನು, ವಿಜಯೇಂದ್ರ ಏನು ಎಂಬುದು ಮೇಲಿನವರಿಗೆ ಗೊತ್ತಾಗಿದೆ. ಯತ್ನಾಳನನ್ನು ಹೊರಹಾಕಲು ಆಗುವುದಿಲ್ಲ ಎಂಬುದು ವಿಜಯೇಂದ್ರ ಬಣದವರಿಗೆ ಗೊತ್ತಾಗಿದೆ. ಮುಂದೆ ಯತ್ನಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ರೇಣುಕಾಚಾರ್ಯ ಅವರು ನನ್ನ ಬಗ್ಗೆ ಮೃದುವಾಗಿದ್ದಾರೆಂದು ಲೇವಡಿ ಮಾಡಿದರು.