ಬೆಂಗಳೂರು: ಸುಮಾರು 11 ವರ್ಷಗಳ ಬಳಿಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (BWSSB) ವತಿಯಿಂದ ನೀರಿನ ದರ ಏರಿಕೆ ಆಗಲಿದೆ. ಈಗಾಗಲೇ ರಾಜ್ಯ ಸರ್ಕಾರ ಜಲಮಂಡಳಿ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಪರಿಷ್ಕೃತ ದರ ಇದೇ ಏಪ್ರಿಲ್ ನಿಂದ ಜಾರಿಗೆ ಆಗುವಂತೆ ಅಧಿಕೃತ ಆದೇಶ ಪ್ರಕಟವಾಗಲಿದೆ. ಈ ಆದೇಶವು ನಾಳೆ ಏಪ್ರಿಲ್ 10ರಂದು ಗುರುವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಹೆಚ್ಚುತ್ತಿರುವ ವೆಚ್ಚ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಸುಮಾರು ಒಂದು ವರ್ಷ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಜಲಮಂಡಳಿ ಮನವಿ ಸಲ್ಲಿಸಿತ್ತು. ಈ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಬಂದವು. ಪ್ರತಿ ಲೀಟರ್ ನೀರಿನ ಬೆಲೆ ಗರಿಷ್ಠ 8 ಪೈಸೆ ಹೆಚ್ಚಿಸುವಂತೆ ಅಧಿಕಾರಿಗಳು ಕೋರಿದ್ದರು. ಎಷ್ಟು ಹೆಚ್ಚಿಸಬೇಕು. ದರ ಏರಿಕೆ ಮಾಡಬೇಕಾ? ಬೇಡವಾ? ಎಂಬ ಚರ್ಚೆ ಬೆನ್ನಲ್ಲೆ ನಾಳೆ ಗುರುವಾರ ಅಧಿಕೃತ ನಿರ್ಧಾರ ಹೊರ ಬೀಳಲಿದೆ ಎನ್ನಲಾಗಿದೆ.
ಏಪ್ರಿಲ್ಗೆ ಜಾರಿ, ಮೇ ತಿಂಗಳಲ್ಲಿ ಪರಿಷ್ಕೃತ ದರ ವಸೂಲಿ! ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿ ಲೀಟರ್ ನೀರಿನ ದರ 1 ಪೈಸೆ ಹೆಚ್ಚಳ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ನಾಲ್ಕು ಹಂತಗಳಲ್ಲಿ ವಸತಿ, ಅಪಾರ್ಟ್ಮೆಂಟ್, ವಾಣಿಜ್ಯ ಬಳಕೆಗಾಗಿ ದರ ವಿಧಿಸಲಾಗಿದೆ. ಇದೇ ಹಂತಗಳಲ್ಲಿ ಮೇ ತಿಂಗಳಿನಿಂದ ಪರಿಸ್ಕೃತ ಹಣ ವಸೂಲಿಗೆ ಜಲಮಂಡಳಿ ಮುಂದಾಗಿದೆ.
ಅಧಿಕೃತ ಆದೇಶಕ್ಕು ಮೊದಲೇ ಅಗತ್ಯ ಎಲ್ಲ ಸಿದ್ಧತೆಗಳನ್ನು ಬೆಂಗಳೂರು ಜಲಮಂಡಳಿ ಮಾಡಿಕೊಂಡಿದೆ. ಇನ್ನೇ ಏರಿಕೆ ಘೋಷಣೆ ಬಾಕಿದೆ. ಬಸ್ ಪ್ರಯಾಣ, ಮೆಟ್ರೋ ಟಿಕೆಟ್, ಹಾಲಿನ ದರ, ಲಿಕ್ಕರ್ ಪ್ರೈಸ್, ಗಾರ್ಬೇಟ್ ಸೆಸ್ ಏರಿಕೆ, ಸಿಲಿಂಡರ್ ದರ ಏರಿಕೆ ಬೆನ್ನಲ್ಲೆ ಜನರಿಗೆ ನೀರಿನ ದರ ಏರಿಕೆಯು ಗಾಯದ ಮೇಲೆ ಬರೆ ಎಳೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ದರ ಏರಿಕೆ ಬಗ್ಗೆ ಅಡಳಿತ ಮತ್ತು ವಿಪಕ್ಷಗಳು ಪ್ರತಿಭಟನೆ ಮಾಡುತ್ತಿವೆ. ನೀರಿನ ದರ ಏರಿಕೆಯು ಆ ಪ್ರತಿಭಟನೆಗಳಿಗೆ ತುಪ್ಪ ಸುರಿಯಲಿದೆ.
ಜಲಮಂಡಳಿಯ ಪ್ರಸ್ತಾವದಂತೆ ಲೀಟರ್ ಕುಡಿಯುವ ನೀರಿನ ಬೆಲೆ ಗರಿಷ್ಠ 7 ಇಲ್ಲವೇ 8 ಪೈಸೆ ಹೆಚ್ಚಳ ಬದಲಾಗಿ, ಒಂದು ಪೈಸೆ ಹೆಚ್ಚಾಗಲಿದೆ. ವಸತಿ, ವಸತಿಯೇತರ ಕಟ್ಟಡಗಳ ಸ್ಲಾಬ್ ಆಧಾರದಲ್ಲಿ ದರ ನಿಗದಿ ಆಗಲಿದೆ. ಇದರೊಂದಿಗೆ ಸ್ಯಾನಿಟರಿ ನೀರಿನ ದರವು ಏರಿಕೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಗಳು 2025ರಲ್ಲಿ ಜನರಿಗೆ ದರ ಏರಿಕೆ ಬರೆ ಹಾಕಿವೆ. ಕಳೆದ ವರ್ಷವೇ ಅಗತ್ಯ ವಸ್ತುಗಳ ದರ ದುಬಾರಿ ಆಗಿದೆ ಎಂದು ಪರದಾಡಿದ್ದರು. ರಾಜ್ಯ ಸರ್ಕಾರದ ಉಚಿತ ಯೋಜನೆಗಳಿಗೂ ಕೆಲವು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆಗೆ ಜನ ಹೈರಾಣಾದರು. ರಾಜ್ಯ ಸರ್ಕಾರ ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಂಡಿದೆ ಎಂದು ರಾಜ್ಯದ ಜನ ದೂರುತ್ತಿದ್ದಾರೆ. ಈ ನಡುವೆ ಬೆಲೆ ಏರಿಕೆ ಸಂಬಂಧ ಉಭಯ ಪಕ್ಷಗಳ ನಾಯಕರ ಪ್ರತಿಭಟನೆ, ಜನಾಕ್ರೋಶದ ಸದ್ದು ಜೋರಾಗಿದೆ.