ಬೆಂಗಳೂರು: “ಒಕ್ಕಲಿಗರು ಯಾರ ಋಣದಲ್ಲಿಲ್ಲ, ಮುನಿರತ್ನ ನಮ್ಮ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಆತ ಮೋದಿಯವರ ತಾಯಿ ಬಗ್ಗೆ ಮಾತನಾಡಿದ್ದನ್ನು ಬಿಜೆಪಿಯವರು ಸಹಿಸಿಕೊಂಡಿರಬಹುದು. ಆದರೆ ನಮಗೆ ಅದು ಸಿಟ್ಟು, ಬೇಸರ ತರಿಸಿತ್ತು. ಈಗ ಅದೇ ಮುನಿರತ್ನ ನಮ್ಮ ಸಹೋದರಿಯರು ಹಾಗೂ ಹೆಣ್ಣು ಕುಲಕ್ಕೆ ಮಾಡಿರುವ ಅಪಮಾನವನ್ನು ನಾವು ಸಹಿಸುವುದಿಲ್ಲ, ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು. ಮುನಿರತ್ನ ಅವರ ಆಡಿಯೋ ಪ್ರಕರಣದಲ್ಲಿ ಬಿಜೆಪಿ ನಾಯಕರ ಸಮರ್ಥನೆ ಹಾಗೂ ಒಕ್ಕಲಿಗ ನಾಯಕರು ಡಿಸಿಎಂ ಭೇಟಿ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಿದ ಅವರು, “ಆ ಸಭೆಗೆ ನಾನು ಹೋಗುತ್ತೇನೆ. ನಮ್ಮ ಸಮಾಜದ ಹಿತದೃಷ್ಟಿಗೆ ಹಾಗೂ ಅವರ ಹೇಳಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಈ ವಿಚಾರ ಇಲ್ಲಿಗೆ ಬಿಟ್ಟರೆ ನಾಳೆ ಮತ್ತೊಬ್ಬರು ಮಾತನಾಡುತ್ತಾರೆ.
ಇದು ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಬಗ್ಗೆ ಮಾತನಾಡಿರುವ ಪದಗಳಲ್ಲ. ಇದು ಸಮಾಜದ ಮಹಿಳೆಯರು, ಸಹೋದರಿಯರ ಬಗ್ಗೆ ಆಡಿರುವ ಮಾತುಗಳು. ಈ ಮಾತುಗಳನ್ನು ಬಿಜೆಪಿ ನಾಯಕರು ಮಾತನಾಡಿದ್ದಾರೆ. ಮೋದಿ ತಾಯಿ ಬಗ್ಗೆ ಆತ ಮಾತನಾಡಿದಾಗ ಅದನ್ನು ಸಹಿಸಿಕೊಳ್ಳುವ ಶಕ್ತಿ ಬಿಜೆಪಿಯವರಿಗೆ ಇರಬಹುದು. ಆದರೆ ನಾವು ಸಹಿಸಲ್ಲ. ನಾವು ಪ್ರಧಾನಿ ಮೋದಿ ಅವರ ಬಗ್ಗೆ ಟೀಕೆ, ಟಿಪ್ಪಣಿ ಮಾಡಿದರೂ ಅವರಿಗೆ ಅವರ ಸ್ಥಾನಕ್ಕೆ ನೀಡಬೇಕಾದ ಗೌರವ ನೀಡುತ್ತೇವೆ. ಅವರ ತಾಯಿಯನ್ನೂ ಗೌರವಿಸುತ್ತೇವೆ.
ನನ್ನ ಜೀವನದಲ್ಲಿ ಎಲ್ಲಾ ಜಾತಿ, ಧರ್ಮದ ಜನರ ಜತೆ ಒಡನಾಟ ಇಟ್ಟುಕೊಂಡು ಬಂದಿದ್ದೇನೆ. ಇಂತಹ ಪದಗಳನ್ನು ನಾನು ಕೇಳಿಯೇ ಇಲ್ಲ. ಅದನ್ನು ನೀವು ಸಮರ್ಥಿಸಿಕೊಂಡರೆ ಇದಕ್ಕಿಂತ ದೌರ್ಭಾಗ್ಯ ಇನ್ನೆನಿದೆ. ಯಾವ ಕಾರಣಕ್ಕೆ ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ನಾಚಿಕೆಯಾಗಬೇಕು. ಒಕ್ಕಲಿಗ ಸಮಾಜ ಇರಲಿ, ಇಡೀ ಹೆಣ್ಣು ಕುಲಕ್ಕೆ ಅಪಮಾನ ಮಾಡಲಾಗಿದೆ” ಎಂದು ಕಿಡಿಕಾರಿದರು.
ಒಕ್ಕಲಿಗ ಸಮಾಜ ಎಲ್ಲವನ್ನು ಗಮನಿಸುತ್ತಿದೆ:ಮುನಿರತ್ನ ಅವರ ವಿರುದ್ಧ ರಾಜಕೀಯ ದ್ವೇಷ ಮಾಡಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಇದು ಮುನಿರತ್ನ ಅವರ ಧ್ವನಿ ಎಂದು ಅವರಿಗೂ ಗೊತ್ತು. ಕೇವಲ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ರೀತಿ ಅವರು ಮಾತನಾಡುತ್ತಾರೆ. ಅಶೋಕ್ ಅವರ ಬಗ್ಗೆ ಯಾವ ರೀತಿ ಪದ ಬಳಕೆ ಮಾಡಿದ್ದಾರೆ ಎಂದು ಅವರ ಸ್ನೇಹಿತರನ್ನು ಕೇಳಿದರೆ ಹೇಳುತ್ತಾರೆ. ತಮ್ಮ ಪಕ್ಷದಲ್ಲಿದ್ದಾರೆ ಎಂದು ಅವರು ಈ ವಿಚಾರಗಳನ್ನು ಮುಚ್ಚಿಕೊಳ್ಳುತ್ತಿರಬಹುದು. ಒಕ್ಕಲಿಗ ಸಮಾಜ ಇದೆಲ್ಲವನ್ನು ಗಮನಿಸುತ್ತಿದೆ. ಇಲ್ಲಿ ಯಾರೂ ಕೂಡ ಅವರಿಗೆ ಪುಗಸಟ್ಟೆಯಾಗಿಲ್ಲ. ಅವರ ಋಣದಲ್ಲಿ ಒಕ್ಕಲಿಗರಿಲ್ಲ. ಒಕ್ಕಲಿಗರ ಋಣದಲ್ಲಿ ಅವರಿದ್ದಾರೆ. ನೀವು ಕೇಳಿದ ಕಾರಣದಿಂದ ನಾನು ಜಾತಿ ಬಗ್ಗೆ ಮಾತನಾಡುತ್ತಿದ್ದೇನೆ” ಎಂದು ತಿಳಿಸಿದರು.
ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರವೃತ್ತಿ: ಬಿಜೆಪಿ ನಾಯಕರಿಗೆ ಈ ವಿಚಾರದಲ್ಲೂ ಪಕ್ಷವೇ ಮುಖ್ಯವಾಯಿತಾ ಎಂದು ಕೇಳಿದಾಗ, “ಅವರು ತಮ್ಮ ಹೇಳಿಕೆಗಳಿಗೆ ಮುಂದೊಂದು ದಿನ ಪಶ್ಚಾತಾಪ ಪಡುತ್ತಾರೆ. ಬಿಜೆಪಿಯವರು ಮಾಡುವುದೆಲ್ಲಾ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಯಾವೆಲ್ಲಾ ಪ್ರಕರಣಗಳಾಗಿವೆ ಎಂದು ಪಟ್ಟಿ ಮಾಡುತ್ತಾ ಬನ್ನಿ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ ಜಿಲ್ಲೆ ನಾಯಕರು ಸೇರಿದಂತೆ ಎಲ್ಲರ ವಿಚಾರ ಪಟ್ಟಿ ಮಾಡಿ. ಹಾಸನ ವಿಚಾರವಾಗಲಿ. ಇದರ ಹಿನ್ನೆಲೆ ಯಾರು ಎಂದು ನೋಡಿ. ಅವರು ಮಾಡಿರುವ ಕೃತ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾ ಬಂದಿದ್ದಾರೆ. ಇದು ಅವರ ಪ್ರವೃತ್ತಿ” ಎಂದು ತಿಳಿಸಿದರು.
ಅಶ್ಚರ್ಯ, ದಿಗ್ಬ್ರಮೆ, ಭಯವಾಗುತ್ತದೆ ತಮ್ಮ ವಿರುದ್ಧವೂ ಶಾಸಕ ಮುನಿರತ್ನ ಅವರು ಷಡ್ಯಂತ್ರ ರೂಪಿಸಿದ್ದರು ಎಂದು ಕೇಳಿದಾಗ, “ಈ ವಿಚಾರವಾಗಿ ನಾನು ಮಾಧ್ಯಮಗಳ ಮೂಲಕ ಮಾಹಿತಿ ಪಡೆದಿದ್ದೇನೆ. ಸಂಪೂರ್ಣ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿ ಇಲ್ಲದೆ ಮಾತನಾಡುವುದಿಲ್ಲ. ರಾತ್ರಿ ಟಿವಿಯಲ್ಲಿ ದೂರು ದಾಖಲಾಗಿದೆ ಎಂದು ವರದಿ ನೋಡಿದೆ. ಕೆಲವು ವಿಚಾರಗಳನ್ನು ಗಮನಿಸಿದಾಗ ಅಶ್ಚರ್ಯ, ದಿಗ್ಬ್ರಮೆ, ಭಯವಾಗುತ್ತದೆ. ನಾವು ಯಾವ ರೀತಿ ಸಾರ್ವಜನಿಕ ಜೀವನ ನಡೆಸಬೇಕು ಎಂದು ಚಿಂತೆಯಾಗಿದೆ. ಇಂತಹ ಆಲೋಚನೆಗಳು ಸಾಮಾನ್ಯ ವ್ಯಕ್ತಿಗಳಿಗೆ ಬರುವುದಿಲ್ಲ. ಕ್ರಿಮಿನಲ್ ಹಿನ್ನಲೆ ಇದ್ದವರಿಗೆ ಮಾತ್ರ ಬರಲು ಸಾಧ್ಯ. ಸರ್ಕಾರ ಈ ವಿಚಾರವಾಗಿ ಗಂಭೀರವಾಗಿ ಗಂಭೀರವಾಗಿ ಆಲೋಚನೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ. ಇದು ರಾಜಕೀಯ ಹೇಳಿಕೆಗೆ ಸೀಮಿತವಾಗಬಾರದು. ಎಲ್ಲಾ ಪಕ್ಷಗಳಲ್ಲೂ ಇಂತಹ ಚಿಂತನೆ ಶುರುವಾದರೆ ಬಹಳ ಕಷ್ಟವಾಗುತ್ತದೆ” ಎಂದರು.
ಇಂತಹ ಕ್ರಿಮಿನಲ್ ಗಳನ್ನು ಬೆಳೆಸಿ ಕಾಂಗ್ರೆಸ್ ತಪ್ಪು ಮಾಡಿದೆಯೇ ಎಂದು ಕೇಳಿದಾಗ, “ನಾನು ಇಲ್ಲಿ ಪಕ್ಷವಾಗಿ ಚರ್ಚೆ ಮಾಡುವುದಿಲ್ಲ. ಇದೊಂದು ಅಸಹ್ಯಕರವಾದ ವಿಚಾರ. ಇದನ್ನು ಯಾವ ಪದಗಳಲ್ಲಿ ಹೇಳಬೇಕೋ ಗೊತ್ತಿಲ್ಲ. ನಾವು ರಾಜಕೀಯ ಮಾಡಬೇಕಾ ಬಿಡಬೇಕಾ, ಯಾವ ಕಾರಣಕ್ಕೆ ಮಾಡಬೇಕು ಎಂಬ ಚಿಂತನೆಗಳೂ ಬಂದಿವೆ. ನಾವು ಯಾವ ಧೈರ್ಯದ ಮೇಲೆ ಮನೆಯಿಂದ ಆಚೆ ಹೋಗಬೇಕು ಎಂದು ಆಲೋಚಿಸಬೇಕಿದೆ. ಎಂತಹ ಎದುರಾಳಿಗಳನ್ನು ಬೇಕಾದರೂ ಎದುರಿಸಬಹುದು. ಆದರೆ ಈ ರೀತಿ ಚಿಂತನೆ ಮಾಡುವವರ ಮಧ್ಯೆ ಕೆಲಸ ಮಾಡುವುದು ಹೇಗೆ ಎಂದು ಅನುಮಾನ ವ್ಯಕ್ತವಾಗುತ್ತದೆ” ಎಂದು ತಿಳಿಸಿದರು. ಇಂತಹ ಕ್ರಿಮಿನಲ್ ವ್ಯಕ್ತಿ ನಿಮ್ಮ ಸ್ನೇಹಿತರಾಗಿದ್ದರ ಬಗ್ಗೆ ಪಶ್ಚಾತಾಪ ಇದೆಯೇ ಎಂದು ಕೇಳಿದಾಗ, “ನಾನು ಸದಾ ಒಳ್ಳೆಯದು ಬಯಸುತ್ತೇನೆ. ಯಾರಿಗೂ ಕೆಟ್ಟದನ್ನು ಬಯಸುವುದಿಲ್ಲ. ಹಾಗೆಯೇ ಎಂತಹುದೇ ಸಂದರ್ಭ ಬಂದರೂ ಯಾರಿಗೂ ಹೆದರುವ ಪರಿಸ್ಥಿತಿಯಲ್ಲಿ ನಾವಿಲ್ಲ. ಸಮಾಜಕ್ಕೆ ನಾವು ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಇಲ್ಲಿನ ಒಳಮರ್ಮಗಳು ನನಗೆ ಅರ್ಥವಾಗುತ್ತಿಲ್ಲ. ನಾನು ಆ ವ್ಯಕ್ತಿಗೆ ಯಾವತ್ತೂ ಕೆಟ್ಟದ್ದನ್ನು ಬಯಸಿಲ್ಲ. ಒಳ್ಳೆಯ ದಾರಿಯಲ್ಲಿ ಕೆಲಸ ಮಾಡಲು ಪ್ರೋತ್ಸಾಹ ನೀಡಿದ್ದೆ” ಎಂದು ತಿಳಿಸಿದರು