ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅವರಿಗೆ ಈಗಲೂ ದೊಡ್ಡ ಅಭಿಮಾನಿ ಬಳಗವಿದೆ. ದಶಕಗಳ ಕಾಲ ಚಿತ್ರರಂಗದ ಮೇರುನಟಿಯಾಗಿ ಮಿಂಚಿದ್ದ ಜಯಂತಿ ಅವರು ತಮ್ಮ ನಟನೆಯ ಮೂಲಕ ಎಲ್ಲರ ಮನೆಮಾತಾಗಿದ್ದರು. ಈಗಲೂ ಅವರ ಸಿನಿಮಾಗಳೆಂದರೆ ಜನ ಕಣ್ಣುಮಿಟುಕಿಸದೆ ನೋಡುತ್ತಾರೆ. ಸಿನಿಮಾದಲ್ಲಿ ಮಿಂಚಿದ್ದ ಜಯಂತಿ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ನಂಟು ಹೊಂದಿದ್ದರು ಎನ್ನುವುದು ವಿಶೇಷ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನಟಿ ಜಯಂತಿ ಅವರೊಂದಿಗಿನ ಒಡನಾಟವನ್ನು ನೆನೆದಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸದಾಶಿವ ಶೆಣೈ ಅವರ ಅಭಿನಯ ಶಾರದೆ ಜಯಂತಿ ಅವರ ಜೀವನಗಾಥೆ “Lovely But lonely” ಕೃತಿಯನ್ನು ಲೋಕಾರ್ಪಣೆಗೊಳಿಸಿ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಇದೇ ವೇಳೆ ಜಯಂತಿ ಅವರು ಸಿದ್ದರಾಮಯ್ಯ ಅವರಿಗೆ ಒಂದು ಹೆಸರನ್ನು ಕೊಟ್ಟಿದ್ದರು ಎಂಬುದನ್ನು ಕೂಡ ರಿವೀಲ್ ಮಾಡಿದ್ದಾರೆ. ಜಯಂತಿ ಅವರು ಅಪಾರ ಮನುಷ್ಯತ್ವ ಹೊಂದಿದ್ದ ಸ್ನೇಹಜೀವಿ ಆಗಿದ್ದರು. ಕಲಾವಿದೆಯಾಗಿ ಜಯಂತಿಗೆ ಜಯಂತಿಯವರೇ ಸಾಟಿ ಆಗಿದ್ದರು. ಅವರು ಮಾನವೀಯವಾಗಿ ಬದುಕನ್ನು ನಡೆಸಿ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ಜಯಂತಿ ಅವರು ನನ್ನನ್ನ ಸದಾ ಪ್ರೀತಿಯಿಂದ “ಹೀರೋ” ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.
ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಪ್ರಯತ್ನಿಸಲಾಗುವುದು. ನನ್ನ ಮತ್ತು ಜಯಂತಿ ಅವರ ರಾಜಕೀಯ ಮೌಲ್ಯಗಳು ಒಂದೇ ಆಗಿದ್ದವು. ಅವರು ಸಮಾಜ ಪ್ರೇಮಿ, ಮಾನವೀಯತೆಯ ಪ್ರೇಮಿ ಆಗಿದ್ದರು. ಹಾಗಾಗಿ ಅವರು ನನಗೆ ಬಹಳ ಆತ್ಮೀಯರಾಗಿದ್ದರು. ನಾವು ಜನತಾದಳದಲ್ಲಿ ಇದ್ದಿದ್ದರಿಂದ ಒಂದೇ ಪಕ್ಷದಲ್ಲಿ ಕೆಲಸ ಮಾಡಿದ್ದೆವು. ಜಯಂತಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೂ ಸ್ಪರ್ಧಿಸಿದ್ದರು. ಜಯಂತಿ ಅವರು ನನ್ನನ್ನು ಯಾವಾಗಲು ಹೀರೋ ಎಂದೇ ಕರೆಯುತ್ತಿದ್ದರು ಎಂದಿದ್ದಾರೆ.
ಜಯಂತಿ ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ ಇದ್ದ ಕಾರಣ ನನ್ನ ಹೀರೋ ಎಂದು ಕರೆಯುತ್ತಿದ್ದರು. ಅವರೊಟ್ಟಿಗೆ ನಾನು ಬಹಳ ಕಡೆ ಪ್ರಚಾರ ಕೂಡ ಮಾಡಿದ್ದೆ. ನಮ್ಮಿಬ್ಬರದ್ದೂ ಒಂದೇ ರೀತಿಯ ರಾಜಕೀಯದ ಮನೋಭಾವ ಇತ್ತು. ಆದರೆ ಅವರು ತಮಗೆ ಎಷ್ಟೇ ನೋವಿದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ ಎಂದು ನೆನೆದಿದ್ದಾರೆ. ನನಗೆ ಜಯಂತಿ ಅವರ ಸಿನಿಮಾಗಳೆಂದರೆ ಬಹಳ ಇಷ್ಟ. ನಾನು ವಿದ್ಯಾರ್ಥಿಯಾಗಿದ್ದಾಗ ಹಾಗೂ ವಕೀಲನಾಗಿದ್ದಾಗಲೂ ಸಿನಿಮಾಗಳನ್ನು ನೋಡುತ್ತಿದ್ದೆ. ಅದರಲ್ಲೂ ಜಯಂತಿ ಅವರ ಸಿನಿಮಾಗಳು ಎಂದರೆ ಮಿಸ್ ಮಾಡುತ್ತಿರಲಿಲ್ಲ. ಅವರು ನಟನೆಯಲ್ಲಿ ಅಪ್ರತಿಮರು. ಅವರ ಅಭಿನಯದ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ನನಗೆ ಬಹಳ ಇಷ್ಟವಾಗಿತ್ತು. ಅದೇ ನಾನು ನೋಡಿದ ಜಯಂತಿ ಅವರ ಕೊನೆಯ ಸಿನಿಮಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಳಿಕ ನಾನು ರಾಜಕಾರಣಕ್ಕೆ ಬಂದು ಮಂತ್ರಿಯಾದ ಮೇಲೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ನಟಿ ಜಯಂತಿ ಅವರಿಗೆ ಅವರೇ ಸಾಟಿ. ಅವರ ಜೀವನದ ಬಗ್ಗೆ ನನ್ನ ಜೊತೆ ಹಲವು ಬಾರಿ ಹೇಳಿಕೊಂಡಿದ್ದರು. ಅವರು ತಮ್ಮ ಜೀವನ ಹಾಗೂ ಸಮಾಜವನ್ನು ಪ್ರೀತಿಸುತ್ತಿದ್ದರು. ವಿಶ್ವದ ಯಾವುದೇ ಭಾಷೆಯ ಸಿನಿಮಾಗಳಿಗಿಂತ ಕನ್ನಡ ಭಾಷೆ ಸಿನಿಮಾಗಳು ಒಳ್ಳೆ ಗುಣಮಟ್ಟ ಕಾಯ್ದುಕೊಂಡಿವೆ. ನಾನು ಸದಾ ನಮ್ಮ ಕನ್ನಡ ಚಿತ್ರರಂಗದ ಪ್ರೋತ್ಸಾಹಕ್ಕೆ ನಿಲ್ಲುತ್ತೇನೆ. ಕನ್ನಡ ಸಿನಿಮಾಗಳಿಗೆ ಶೇ 100ರಷ್ಟು ತೆರಿಗೆ ವಿನಾಯಿತಿ ಘೋಷಿಸಿದ್ದು ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಿ.ಲಂಕೇಶ್ ಅವರು ನನಗೆ ಗುರುಗಳ ರೀತಿ. ಪತ್ರಿಕೆ ಕಚೇರಿಗೆ ಹೋಗಿ ಮಾರ್ಗದರ್ಶನ ಪಡೆಯುತ್ತಿದ್ದೆ ಎಂದೂ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದರು. ನಟ ರಮೇಶ್ ಅರವಿಂದ್, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ದೇಶಕಿ ಕವಿತಾ ಲಂಕೇಶ್, ಹಿರಿಯ ಪತ್ರಕರ್ತ ಸಮೀವುಲ್ಲಾ, ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಮತ್ತು ಕೃತಿಯ ಲೇಖಕರಾದ ಸದಾಶಿವ ಶೆಣೈ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರು ಉಪಸ್ಥಿತರಿದ್ದರು.