ಬೆಂಗಳೂರು: ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಆತನ ವಿರುದ್ಧವೇ ದೂರು ನೀಡಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮುಖವಾಡ ಸಿಸಿಟಿವಿಯಿಂದ ಬಯಲಾಗಿದೆ. ಕನ್ನಡಿಗನ ಮೇಲೆ ಬೋಸ್ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ವೈರಲ್ ಆದ ಬೆನ್ನಲ್ಲೇ ಆತನ ವಿರುದ್ಧವೂ ಪ್ರತಿದೂರು ನೀಡಲಾಗಿದೆ. ಆದರೆ ಪೊಲೀಸರು ಸತಾಯಿಸಿ ಕೊನೆಗೂ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿ ವಿಂಗ್ ಕಮಾಂಡರ್ ಬಂಧನಕ್ಕೆ ಕನ್ನಡಿಗರು ಆಗ್ರಹಿಸುತ್ತಿದ್ದು, ಈ ಕೇಸ್ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಬಿ.ದಯಾನಂದ್ ಮಹತ್ವದ ಮಾಹಿತಿ ನೀಡಿದ್ದಾರೆ.

ಈ ಘಟನೆ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣಗಳು ದಾಖಲಿಸಲಾಗಿದೆ. ಪೊಲೀಸರು ಎರಡೂ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ವಿಧಾನಗಳ ಆಧಾರದ ಮೇಲೆ ನಾವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಬೈಕ್ ಸವಾರ ಮತ್ತು ಕಾರಿನಲ್ಲಿ ಚಾಲಕ ಮತ್ತು ಸಹ-ಪ್ರಯಾಣಿಕನ ನಡುವಿನ ಸಣ್ಣ ವಾಗ್ವಾದದಿಂದಾಗಿ ಇದು ಸಂಭವಿಸಿರುವಂತೆ ತಿಳಿದುಬಂದಿದೆ. ಸೂಕ್ತ ತನಿಖೆಯ ನಂತರವೇ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಕಮೀಷನರ್ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದಾರೆ.
ಎಫ್ಐಆರ್ನಲ್ಲಿ ವಿಂಗ್ ಕಮಾಂಡರ್ ಹೆಸರೇ ಇಲ್ಲ ವಿಂಗ್ಕಮಾಂಡ್ ವಿಡಿಯೋ ಮಾಡಿದ್ದರಿಂದ ಕನ್ನಡಿಗನ ಮೇಲೆ ದೂರು ದಾಖಲಿಸಿಕೊಂಡು, ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದರು. ಆದರೆ ಸಿಸಿಟಿವಿ ವಿಡಿಯೋಗಳು ವೈರಲ್ ಆದ ನಂತರ ವಿಂಗ್ ಕಮಾಂಡರ್ ಕೂಡ ಮಾರಣಾಂತಿಕ ಹಲ್ಲೆ ನಡೆಸಿದ್ದ ಎಂಬುದು ತಿಳಿದುಬಂದಿತ್ತು. ಹಾಗಾಗಿ ಕನ್ನಡಿಗ ಪ್ರತಿದೂರು ಕೊಟ್ಟರೂ ಪೊಲೀಸರು ಎಫ್ಐಆರ್ ದಾಖಲಿಸದೆ ಸುಮ್ಮನಾಗಿದ್ದರು. ಇದರಿಂದ ಆಕ್ರೋಶಗೊಂಡ ಕನ್ನಡಿಗರು ನ್ಯಾಯಕ್ಕಾಗಿ ಕನ್ನಡಿಗನ ಪರ ಧ್ವನಿ ಎತ್ತಿದರು. ರಾತ್ರಿಯಿಡೀ ಪೊಲೀಸ್ ಠಾಣೆ ಬಳಿ ಇದ್ದರೂ ಪೊಲೀಸರು ಎಫ್ಐಆರ್ ದಾಖಲಿಸದೆ, ಇಂದು ಬೆಳಿಗ್ಗೆ ಎಫ್ಐಆರ್ ನೀಡಿದ್ದರು. ಆದರೆ, ಆ ಎಫ್ಐಆರ್ ಪ್ರತಿಯಲ್ಲಿ ವಿಂಗ್ಕಮಾಂಡರ್ ಹೆಸರೇ ಉಲ್ಲೇಖವಾಗಿಲ್ಲ ಎಂದು ಇದೀಗ ತಿಳಿದುಬಂದಿದೆ.
ಎಫ್ಐಆರ್ ಪ್ರತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಂಗ್ಕಮಾಂಡ್ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ. ಕನ್ನಡಿಗರು ಧ್ವನಿ ಎತ್ತಿದ್ದರಿಂದ ಮೇಲ್ನೋಟಕ್ಕೆ ಸುಮ್ಮನೆ ಎಫ್ಐಆರ್ ದಾಖಲಿಸಿದ್ದಾರೆ. ಇದರ ಹಿಂದೆ ಪ್ರಭಾವಿಗಳ ಕೈವಾಡವೂ ಇದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಕನ್ನಡ ನೆಲದಲ್ಲಿ ಕನ್ನಡಿಗನಿಗೆ ಆಗಿರುವ ಈ ಕೃತ್ಯದ ಬಗ್ಗೆ ನ್ಯಾಯ ಕೊಡಿಸುವ ಬದಲು ಪೊಲೀಸರು ಆ ಹಲ್ಲೆಗೆ ಯತ್ನಿಸಿದ ಅಧಿಕಾರಿ ಪರ ನಿಂತಿದ್ದಾರೆ ಎಂದು ದೂರಿದ್ದಾರೆ.
ಏನಿದು ಪ್ರಕರಣ? ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಾಗೂ ಕನ್ನಡಿಗ ಟೆಕ್ಕಿ ಹೊಡೆದಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಐಎಎಫ್ ಅಧಿಕಾರಿ ಹಾಗೂ ಆತನ ಪತ್ನಿ ಕನ್ನಡಿಗನ ಮೇಲೆ ಹಲ್ಲೆ ನಡುರಸ್ತೆಯಲ್ಲೇ ಹಲ್ಲೆ ಯತ್ನ ನಡೆಸಿದ್ದರು. ಬಳಿಕ ಕನ್ನಡದ ವಿಚಾರವಾಗಿ ನನ್ನನ್ನು ಥಳಿಸಿದರು ಎಂದು ಅಧಿಕಾರಿ ಕಥೆ ಕಟ್ಟಿ ವಿಡಿಯೋ ಶೇರ್ ಮಾಡಿದ್ದ. ಇದನ್ನು ಸರಿಯಾಗಿ ಪರಿಶೀಲಿಸದ ಪೊಲೀಸರು ತಪ್ಪು ಕನ್ನಡಿಗನದ್ದೇ ಎಂದು ಬಂಧಿಸಿದ್ದಾರೆ. ಬಳಿಕ ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ವಿಂಗ್ ಕಮಾಂಡರ್ನ ಅಸಲಿ ಮುಖ ಬಯಲಾಗಿತ್ತು. ಆತನೇ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಒಟ್ಟಾರೆ ಇಬ್ಬರೂ ಗಲಾಟೆ ಮಾಡಿಕೊಂಡಿದ್ದು, ಇಬ್ಬರ ವಿರುದ್ಧವೂ ಕೇಸ್ ದಾಖಲಾಗಿದೆ.