ಆಸ್ಪತ್ರೆಯಲ್ಲಿ ದರ್ಶನ್ ಬಳಿ ಬಂದ ಅಭಿಮಾನಿ ಮಾಡಿದ್ದೇನು? ದಾಸ ಸಿಟ್ಟಾಗಿದ್ದೇಕೆ?

ಆಸ್ಪತ್ರೆಯಲ್ಲಿ ದರ್ಶನ್ ಬಳಿ ಬಂದ ಅಭಿಮಾನಿ ಮಾಡಿದ್ದೇನು? ದಾಸ ಸಿಟ್ಟಾಗಿದ್ದೇಕೆ?

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ನೀಡುವಂತೆ ದರ್ಶನ್ ಹಾಗೂ ಕುಟುಂಬಸ್ಥರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಬೆನ್ನು ನೋವು ಇರುವ ಬಗ್ಗೆ ಹೈಕೋರ್ಟ್ ವೈದ್ಯಕೀಯ ವರದಿ ಕೇಳಿದ್ದು, ಹೀಗಾಗಿ ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಸೇರಿದಂತೆ ಇತರ ಚಿಕಿತ್ಸೆ ಆರಂಭವಾಗಿದೆ.

ಮೊದಲು ಬಳ್ಳಾರಿಯಲ್ಲಿ ಚಿಕಿತ್ಸೆ ಸ್ಕ್ಯಾನಿಂಗ್ ಏನೂ ಬೇಡ ಎಂದು ಹಠಕ್ಕೆ ಬಿದ್ದಿದ್ದ ದರ್ಶನ್ಗೆ ಸದ್ಯ ವೈದ್ಯಕೀಯ ವರದಿ ಇದ್ದರಷ್ಟೇ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಸಿಗಬಹುದು ಎನ್ನುವುದು ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ವಿಮ್ಸ್ಗೆ ತೆರಳಲು ದರ್ಶನ್ ಒಪ್ಪಿಗೆ ನೀಡಿದ್ದು, ನಿನ್ನೆ ( ಅಕ್ಟೋಬರ್ 22) ಮಂಗಳವಾರ ರಾತ್ರಿ ವಿಮ್ಸ್ನಲ್ಲಿ ದರ್ಶನ್ಗೆ ವೈದ್ಯಕೀಯ ತಪಾಸಣೆ ನಡೆದಿದೆ.

ಜೈಲಿನಿಂದ ಆಯಂಬುಲೆನ್ಸ್ನಲ್ಲಿ ದರ್ಶನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ದರ್ಶನ್ ವಿಮ್ಸ್ ಆಸ್ಪತ್ರೆಗೆ ಬರುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರದಿದ ಕಾರಣ ದರ್ಶನ್ ಬರುವ ಸಮಯದಲ್ಲಿ ಆಸ್ಪತ್ರೆಯಲ್ಲಿ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ದರ್ಶನ್ ಬರುತ್ತಿದ್ದಂತೆ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೂಗುತ್ತಾ ದರ್ಶನ್ ಹತ್ತಿರ ಬರಲು ಪ್ರಯತ್ನಿಸಿದರು.

ಪೊಲೀಸ್ ಬಿಗಿ ಭದ್ರತೆಯಲ್ಲಿ ದರ್ಶನ್ನನ್ನು ಆಸ್ಪತ್ರೆಗೆ ಒಳಗೆ ಕರೆದುಕೊಂಡು ಹೋಗಲಾಯಿತು. ಆದರೆ ಹೊರಕ್ಕೆ ಬರುವ ಸಮಯದಲ್ಲಿ ಯಡವಟ್ಟು ನಡೆದಿದೆ. ದರ್ಶನ್ ಆಸ್ಪತ್ರೆಯಿಂದ ಹೊರಡುವ ವೇಳೆ ಅಭಿಮಾನಿಯೊಬ್ಬ ಪೊಲೀಸರನ್ನು ತಳ್ಳಿ ಬಂದು ದರ್ಶನ್ ಬಳಿ ಬಂದು ಕೈ ಹಿಡಿದು ಎಳೆದಾಡಿದ್ದಾನೆ. ಮೊದಲೇ ನೋವಿನ ಒತ್ತಡದಲ್ಲಿರುವ ದರ್ಶನ್ ಈ ವೇಳೆ ಅಭಿಮಾನಿಯ ವಿರುದ್ಧ ಗರಂ ಆದ ಪ್ರಸಂಗ ನಡೆದಿದೆ. ಕೂಡಲೇ ಪೊಲೀಸರು ಆತನನ್ನು ಅಲ್ಲಿಂದ ಕಳುಹಿಸಿದ್ದಾರೆ.

ಇನ್ನು ವಿಮ್ಸ್ ಆಸ್ಪತ್ರೆಯಲ್ಲಿ ದರ್ಶನ್ಗೆ ಎಂಆರ್ಐ ಸ್ಕ್ಯಾನಿಂಗ್ ಮಾಡಲಾಗಿದ್ದು, ವರದಿ ಬಂದ ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯದ ಮೇರೆಗೆ ದರ್ಶನ್ ಅನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡುವಂತೆ ಕೋರಿ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಸದ್ಯ ದರ್ಶನ್ ವೈದ್ಯಕೀಯ ವರದಿಗಾಗಿ ಕುಟುಂಬಸ್ಥರು ಹಾಗೂ ಪೊಲೀಸ್ ಅಧಿಕಾರಿಗಳು ಕಾದಿದ್ದಾರೆ.

Leave a Reply

Your email address will not be published. Required fields are marked *