ಆದಾಯ ಬಜೆಟ್ ಹಾಗೂ ಬಂಡವಾಳ ಬಜೆಟ್ನ ವ್ಯತ್ಯಾಸವೇನು?

ಆದಾಯ ಬಜೆಟ್ ಹಾಗೂ ಬಂಡವಾಳ ಬಜೆಟ್ನ ವ್ಯತ್ಯಾಸವೇನು?

2025ನೇ ಸಾಲಿನ ಕೇಂದ್ರ ಬಜೆಟ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರ ಶನಿವಾರ ಬಜೆಟ್ ಮಂಡಿಸಲಿದ್ದಾರೆ. ಇನ್ನು ಸರ್ಕಾರಗಳು ಮಂಡಿಸುವ ಬಜೆಟ್ನಲ್ಲಿ ಹಲವು ವಿಧಗಳಿದ್ದು, ಅವುಗಳಲ್ಲಿ ಆದಾಯ ಬಜೆಟ್ (revenue budget) ಹಾಗೂ ಬಂಡವಾಳ ಬಜೆಟ್ ಸಹ (capital budget) ಇವೆ. ಇವುಗಳ ವ್ಯಾಖ್ಯಾನವನ್ನು ಈ ಸ್ಟೋರಿಯಲ್ಲಿ ತಿಳಿಯಿರಿ..

ಆದಾಯ ಬಜೆಟ್ ಎಂದರೆ ಸರ್ಕಾರದ ಆದಾಯ ಸ್ವೀಕೃತಿ ಮತ್ತು ವೆಚ್ಚಗಳ ಮೊತ್ತವನ್ನು ಒಳಗೊಂಡಿರುತ್ತದೆ. ಇದರಲ್ಲಿ ಮುಖ್ಯವಾಗಿ ರಶೀದಿಗಳು, ಮೂಲಭೂತವಾಗಿ ಸರ್ಕಾರಕ್ಕೆ ಆದಾಯ ಬರುವ ಮೂಲಗಳನ್ನು ಈ ಆದಾಯ ಬಜೆಟ್ ವಿವರಿಸುತ್ತದೆ. ಈ ಆದಾಯ ಬಜೆಟ್ ಅನ್ನು ತೆರಿಗೆ ಆದಾಯ ಮತ್ತು ತೆರಿಗೆಯೇತರ ಆದಾಯ ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.

ತೆರಿಗೆ ಆದಾಯವು ಕಾರ್ಪೊರೇಷನ್ ತೆರಿಗೆ, ಆದಾಯದ ಮೇಲಿನ ತೆರಿಗೆ, ಮತ್ತು ಪರೋಕ್ಷ ತೆರಿಗೆಗಳಾದ ಜಿಎಸ್ಟಿ, ಸೆಸ್, ಆಮದು ಅಥವಾ ರಫ್ತು ಸುಂಕಗಳು ಸೇರಿದಂತೆ ಪ್ರಮುಖ ವರ್ಗಗಳನ್ನು ಒಳಗೊಂಡಿವೆ. ಇನ್ನು ತೆರಿಗೆಯೇತರ ಆದಾಯವು ಸರ್ಕಾರದ ಹೂಡಿಕೆಗಳು, ಸಾಲಗಳು ಮತ್ತು ಅಲ್ಲಿ ಸಲ್ಲಿಸುವ ಇತರ ಸೇವೆಗಳಿಂದ ಗಳಿಸಿದ ಆದಾಯವನ್ನು ಒಳಗೊಂಡಿರುತ್ತದೆ. ಆದಾಯ ವೆಚ್ಚವು ತನ್ನ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಡೆಸುವಲ್ಲಿ ಸರ್ಕಾರದ ವೆಚ್ಚಗಳನ್ನು ಮತ್ತು ನಾಗರಿಕರಿಗೆ ಅದು ಒದಗಿಸುವ ಸೇವೆಗಳು, ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ವಿವರಿಸುತ್ತದೆ. ಸಾಮಾಜಿಕ ಭದ್ರತೆ, ಪಿಂಚಣಿ, ಇಎಸ್ಐ ಮೂಲಕ ವೈದ್ಯಕೀಯ ಸೇವೆಗಳು ಮತ್ತು ಇತ್ಯಾದಿಗಳನ್ನು ಇದು ಒಳಗೊಂಡಿದೆ. ಅಲ್ಲದೆ ಎರವಲು ಪಡೆಯುವ ಸಾಲಗಳಿಗೆ ಪಾವತಿಸುವ ಬಡ್ಡಿ ಮತ್ತು ಅಗತ್ಯ ಸಬ್ಸಿಡಿಗಳನ್ನು ನೀಡಲು ಏನನ್ನು ಖರ್ಚು ಮಾಡುತ್ತದೆ? ಎಂಬುದನ್ನು ಸಹ ಒಳಗೊಂಡಿರುತ್ತದೆ.

ವಾರ್ಷಿಕ ಕೇಂದ್ರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಆದಾಯ ಸ್ವೀಕೃತಿ ಮತ್ತು ವೆಚ್ಚಗಳ ಒಟ್ಟು ಬಿಲ್ ಅನ್ನು ಸಹ ಮಂಡಿಸಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರದ ವೆಚ್ಚವು ಅದರ ಆದಾಯವನ್ನು ಮೀರುತ್ತದೆ. ಇದೇ ಆದಾಯದ ಕೊರತೆ ಅಥವಾ ಹಣಕಾಸಿನ ಕೊರತೆಯನ್ನು ಸೃಷ್ಟಿಸುತ್ತದೆ. ಆದಾಯ ಬಜೆಟ್ ಭಾರತ ಸರ್ಕಾರದ ಆದಾಯ ಸ್ವೀಕೃತಿಗಳನ್ನು ಹಾಗೂ ಆ ಆದಾಯವನ್ನು ಬಳಸಿಕೊಂಡು ಮಾಡಿದ ವೆಚ್ಚವನ್ನು ಒಳಗೊಂಡಿರುತ್ತದೆ. ಆದಾಯ ಬಜೆಟ್ನಲ್ಲಿ ಸರ್ಕಾರಕ್ಕೆ ಆದಾಯ ಎಲ್ಲಿಂದ ಬರುತ್ತಿದೆ ಎಂಬುದನ್ನು ವಿವರಿಸಲಾಗುತ್ತದೆ. ಸರ್ಕಾರವು ವಿವಿಧ ಮಾರ್ಗಗಳ ಮೂಲಕ ಹೂಡಿಕೆ ಮಾಡುತ್ತದೆ ಮತ್ತು ಅವುಗಳ ಮೇಲೆ ಬಡ್ಡಿ ಮತ್ತು ಲಾಭಾಂಶವನ್ನು ಪಡೆಯುತ್ತದೆ. ಅದರ ತೆರಿಗೆಯೇತರ ಆದಾಯವು ಸರ್ಕಾರವು ಷೇರುಗಳನ್ನು ಹೊಂದಿರುವ ಕಂಪನಿಗಳಲ್ಲಿ ಮಾಡುವ ಹೂಡಿಕೆಗಳನ್ನು ಒಳಗೊಂಡಿರುತ್ತವೆ. ಇದರಿಂದ ಸರ್ಕಾರಕ್ಕೆ ಆದಾಯವೂ ಬರುತ್ತದೆ.

ಬಂಡವಾಳ ಬಜೆಟ್ ಎಂದರೇನು?: ಬಂಡವಾಳದ ಬಜೆಟ್ ಸಾಮಾನ್ಯವಾಗಿ ಬಂಡವಾಳದ ರಸೀದಿಗಳು ಹಾಗೂ ಬಂಡವಾಳ ವೆಚ್ಚಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಹೂಡಿಕೆ, ಎರವಲು, ಸಾರ್ವಜನಿಕ ಅಥವಾ ವಿದೇಶಿ ಸರ್ಕಾರಗಳಿಂದ ಸಾಲಗಳು, ಭಾರತೀಯ ರಿಸರ್ವ್ ಬ್ಯಾಂಕ್, ಯಂತ್ರೋಪಕರಣಗಳ ಅಭಿವೃದ್ಧಿ, ಆರೋಗ್ಯ ಸೌಲಭ್ಯಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಬಂಡವಾಳ ಬಜೆಟ್ ಅನ್ನು ಬಂಡವಾಳ ರಸೀದಿಗಳು ಮತ್ತು ಬಂಡವಾಳ ವೆಚ್ಚಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಬಂಡವಾಳ ರಸೀದಿಗಳು ಒಳಬರುವ ನಗದು ಹರಿವುಗಳನ್ನು ಉಲ್ಲೇಖಿಸುತ್ತವೆ. ಅವು ಸಾಲವಲ್ಲದ ಅಥವಾ ಸಾಲದ ರಸೀದಿಗಳಾಗಿರಬಹುದು. ಸಾರ್ವಜನಿಕರಿಂದ ಸಾಲ, ವಿದೇಶಿ ಸರ್ಕಾರಗಳು ಮತ್ತು ಆರ್ಬಿಐ ಬಂಡವಾಳ ರಸೀದಿಗಳ ಪ್ರಮುಖ ಭಾಗವಾಗಿದೆ.

Leave a Reply

Your email address will not be published. Required fields are marked *