ರಾತ್ರಿ ಭೋಜನ ಎನ್ನುವುದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ರಾತ್ರಿ ಸೇವನೆ ಮಾಡುವ ಆಹಾರದ ಸಮಯ ಕೂಡ ಬಹಳ ಮುಖ್ಯವಾಗುತ್ತದೆ. ಖ್ಯಾತ ಆಹಾರ ತಜ್ಞರು ನಾವು ರಾತ್ರಿ ಭೋಜನ ಸೇವಿಸುವ ಸಮಯದ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದಾರೆ .
ಕಾಲಾಯ ತಸ್ಮೈ ನಮಃ ಎನ್ನುತ್ತಾರೆ. ಸಮಯವೇ ಎಲ್ಲವನ್ನೂ ಹೇಳುತ್ತದೆ ಎಂದು ಹಿರಿಯರು ಹೇಳಿರುವುದನ್ನು ಕೇಳಿರುತ್ತೀರಿ. ಈ ಮಾತು ನಮ್ಮ ಆಹಾರ ಪದ್ಧತಿಯ ವಿಚಾರಕ್ಕೆ ಬಂದಾಗ ಕೂಡ ನಿಜ ಎನಿಸುತ್ತದೆ . ನಮ್ಮಲ್ಲಿ ಅನೇಕರಿಗೆ ನಾವು ರಾತ್ರಿ ಎಷ್ಟು ಗಂಟೆಗೆ ತಿಂದು ಮುಗಿಸಬೇಕು? ಎಷ್ಟು ತಿನ್ನಬೇಕು? ಏನು ಸೇವಿಸಬೇಕು ಎಂಬುದು ತಿಳಿದಿರುವುದಿಲ್ಲ. ಈ ಎಲ್ಲಾ ಗೊಂದಲಗಳಿಗೆ ಖ್ಯಾತ ಆಹಾರ ತಜ್ಞರಾದ ಕನ್ನಿಖಾ ಮಲ್ಹೋತ್ರಾ ಆಹಾರದ ಸಮಯ ಏಕೆ ಮುಖ್ಯ ಎನ್ನುವುದನ್ನು ಅರ್ಥಮಾಡಿಸಿದ್ದಾರೆ.
ರಾತ್ರಿಯ ಭೋಜನ ಹಾಗೂ ಮಲಗುವ ಸಮಯದ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಇದು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದು ಸೇರಿದಂತೆ ನಮ್ಮ ಆರೋಗ್ಯದ ಒಟ್ಟಾರೆ ಯೋಗಕ್ಷೇಮವನ್ನು ನೋಡಿಕೊಳ್ಳುವಲ್ಲಿ ಸಹಾಯಕವಾಗಿದೆ. ಇದರಿಂದ ಅಜೀರ್ಣದಂತಹ ಸಮಸ್ಯೆಗಳನ್ನು ದೂರಮಾಡಲು ಸಹಾಯ ಮಾಡುತ್ತದೆ. ಮಲಗಲು ಕೆಲವೇ ಕೆಲವು ನಿಮಿಷಗಳು ಇರುವಾಗ ತಿನ್ನುವುದರಿಂದ ಅಜೀರ್ಣದಂತಹ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.