ಗಣೇಶ ಚತುರ್ಥಿಗೆ ಗಣೇಶ ಮೂರ್ತಿ ಇಡುವಾಗ ಹಾಗೂ ಮನೆ ತರುವಾಗ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು..?

ಗಣೇಶ ಚತುರ್ಥಿಗೆ ಗಣೇಶ ಮೂರ್ತಿ ಇಡುವಾಗ ಹಾಗೂ ಮನೆ ತರುವಾಗ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು..?

ಗೌರಿ- ಗಣೇಶ ಹಬ್ಬಕ್ಕೆ ಅತಿ ಮುಖ್ಯವಾದ ಭಾಗ ಅಂದರೆ ಮನೆಗೆ ತಾಯಿ- ಮಗನ ಮೂರ್ತಿಯನ್ನು ತರುವುದಾಗಿರುತ್ತದೆ. ನೆನಪಿನಲ್ಲಿಡಿ, ಗಣೇಶ ಹಾಗೂ ಗೌರಿ ಪೂಜೆಯಲ್ಲಿ ಶ್ರದ್ಧೆ ಹಾಗೂ ಪೂಜಾ ಕ್ರಮಕ್ಕೆ ಬಹಳ ಹೆಚ್ಚಿನ ಪ್ರಾಶಸ್ತ್ಯ. ಗಣೇಶ ಹಾಗೂ ಗೌರಿಯ ಮೂರ್ತಿಯನ್ನು ಸ್ವತಃ ಆಯಾ ಮನೆಯವರೇ ಶುದ್ಧವಾದ ಜೇಡಿ ಮಣ್ಣಿನಿಂದ ತಯಾರಿಸುವುದು ಸರ್ವಶ್ರೇಷ್ಠವಾದುದು. ಒಂದು ವೇಳೆ ಮನೆಯಲ್ಲಿ ತಾವೇ ಶುದ್ಧ ಜೇಡಿ ಮಣ್ಣಿನಿಂದ ಗೌರಿ- ಗಣೇಶನ ಮೂರ್ತಿಯನ್ನು ತಯಾರಿಸಿದಲ್ಲಿ ಅದಕ್ಕಾಗಿ ಸಸ್ಯದಿಂದ ತಯಾರಿಸಿದ ಬಣ್ಣವನ್ನೋ ಅಥವಾ ಸಿಂಧೂರವನ್ನೋ ಅಥವಾ ಯಾವುದೇ ರಾಸಾಯನಿಕ ಬಳಸದೆ ತಯಾರಿಸಿದ ಕುಂಕುಮವನ್ನೋ ಬಣ್ಣವಾಗಿ ವಿಗ್ರಹಕ್ಕೆ ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ರಾಸಾಯನಿಕವನ್ನು ಬಳಸಬಾರದು. ಇನ್ನು ಮನೆಯಲ್ಲಿ ಕೆಲವರು ತಮ್ಮಲ್ಲಿ ಗೌರಿಗೆ ಪ್ರತ್ಯೇಕವಾದ ಪೂಜೆ ಮಾಡುವ ಪದ್ಧತಿಯಿಲ್ಲ ಎನ್ನುವವರುಂಟು. ಹಾಗಂತ ಗೌರಿಯ ಮೂರ್ತಿಯನ್ನು ಗಣೇಶನ ಜೊತೆಗೆ ಇಡದಿರುವುದು ಸರ್ವತಾ ಸಾಧುವಲ್ಲ.

ಮನೆಯಲ್ಲಿ ಎಷ್ಟು ಸ್ಥಳಾವಕಾಶ ಇದೆ ಎಂಬುದನ್ನು ನೋಡಿಕೊಂಡು, ಮೂರ್ತಿಗಳನ್ನು ತೆಗೆದುಕೊಂಡು ಬನ್ನಿ. ಗೌರಿ ವ್ರತದ ಪ್ರತ್ಯೇಕ ಆಚರಣೆ ಇಲ್ಲ ಎಂದಾದಲ್ಲಿ ವಿನಾಯಕ ಚತುರ್ಥಿ ಇರುವ ದಿನದಂದು ಬೆಳಗ್ಗೆಯೇ ಮನೆಗೆ ಗೌರಿ- ಗಣೇಶ ಮೂರ್ತಿಯನ್ನು ತಂದರೆ ಏನೂ ತೊಂದರೆ ಇಲ್ಲ.

ಪಿಳ್ಳಾರಿ ಗಣಪತಿಯೂ ಶ್ರೇಷ್ಠ

ಇನ್ನು ಗೋವಿನ ಸಗಣಿ (ಗೋಮಯ) ಹಾಗೂ ಮಣ್ಣು ಇವೆರಡು ಬಳಸಿ ಅದರಿಂದ ಕೂಡ ಗಣಪತಿ ಹಾಗೂ ಗೌರಿಯ ಮೂರ್ತಿ ತಯಾರಿಸಬಹುದು. ಅದೇ ರೀತಿ ಗೋಮಯವನ್ನು ಪಿಡಿಚೆ ಮಾಡಿ, ಅದರ ಮೇಲೆ ಗರಿಕೆಯನ್ನು ಇಟ್ಟು, ಅದನ್ನು ಪೂಜೆ ಮಾಡಲಾಗುತ್ತದೆ. ಇದನ್ನು ಪಿಳ್ಳಾರಿ ಗಣಪತಿ ಎನ್ನಲಾಗುತ್ತದೆ. ಇದು ಪ್ರಕೃತಿಸ್ನೇಹಿಯೂ ಹೌದು, ಅದರ ಜೊತೆಗೆ ಇಂದಿನ ದಿನಮಾನದಲ್ಲಿ ನಾವು ಕಾಣುವ ಈ ವೈವಿಧ್ಯಮಯ ಗಣಪತಿಗಳ ಮುಂಚೆ ಆರಾಧನೆಗೆ ಬಳಸುತ್ತಿದ್ದುದು ಇದನ್ನೇ. ಆರಂಭದಲ್ಲಿಯೇ ಹೇಳಿದಂತೆ ಯಾವುದೇ ದೇವತಾ ಪೂಜೆಯಲ್ಲಿ ಶಾಸ್ತ್ರ, ಕ್ರಮ, ಶ್ರದ್ಧೆ ಹಾಗೂ ಪದ್ಧತಿ ಇವು ಮುಖ್ಯವಾಗುತ್ತವೆ. ಮನೆಯಲ್ಲಿ ಮಕ್ಕಳಿಗೂ ಆಸಕ್ತಿ ಬರಲಿ, ಅವರು ಇನ್ನಷ್ಟು ಉತ್ಸಾಹದಿಂದ ಪಾಲ್ಗೊಳ್ಳಲಿ ಎಂಬ ಕಾರಣಕ್ಕೆ ಬಣ್ಣ ಬಣ್ಣದ- ವಿವಿಧ ಪೋಷಾಕಿನ ಗಣಪತಿ- ಗೌರಿಯ ಮಣ್ಣಿನ ಮೂರ್ತಿ- ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ತಯಾರಿಸಿದ್ದನ್ನು ಮನೆಗೆ ತರುತ್ತೇವೆ ಎನ್ನುವವರುಂಟು. ಗಣಪತಿ ಅಂದರೆ ಪರಿಸರದ ಸಂಕೇತ. ಪರಿಸರಸ್ನೇಹಿ ಗಣಪತಿ ಪೂಜೆಗೆ ಹೆಚ್ಚು ಫಲ ಹಾಗೂ ಅದೇ ಸಹಜ ಕೂಡ.

ಗೌರಿ- ಗಣೇಶ ಇಬ್ಬರೂ ಮನೆಗೆ ಬರಬೇಕು

ಅಂತಿಮವಾಗಿ, ಕಾಲಾನುಕಾಲದಿಂದ ನಡೆದು ಬಂದ ಪದ್ಧತಿ ಮಕ್ಕಳಿಗೆ ಪರಿಚಯಿಸಬೇಕು ಎಂಬ ಉದ್ದೇಶವು ಒಳ್ಳೆಯದು ಆದ್ದರಿಂದ ಅಂಗಡಿಯಿಂದ ಮನೆಗೆ ಖರೀದಿಸಿ ತರುವ ವಿಧಾನದ ಬಗ್ಗೆ ಗಮನ ಹರಿಸೋಣ. ಅಂಗಡಿಗೆ ತೆರಳುವ ವೇಳೆ ಒಂದು ತಟ್ಟೆ ಅಥವಾ ದೊಡ್ಡ ಗಾತ್ರದ ಬುಟ್ಟಿ ಅಥವಾ ಬೇರೆ ಯಾವುದೇ ಮೂರ್ತಿ ಹೊತ್ತು ತರಬಲ್ಲಂಥ ಚೀಲವನ್ನು ತೆಗೆದುಕೊಂಡು ಹೋಗುವಾಗ ಅದರಲ್ಲಿ ಅಲ್ಪ ಪ್ರಮಾಣದಲ್ಲಿ ಅಕ್ಕಿಯನ್ನು ಹಾಕಿಕೊಂಡು ಹೋಗಿರಬೇಕು. ಮನೆಗೆ ತರುವಾಗ ಗೌರಿ- ಗಣೇಶ ಎರಡೂ ಮೂರ್ತಿಯನ್ನು ತನ್ನಿ. ಸಾಧ್ಯವಾದಷ್ಟು ಚಿಕ್ಕದಾದ ಹಾಗೂ ನೀರಿನಲ್ಲಿ ಮುಳುಗಿಸಿದಲ್ಲಿ ಸುಲಭವಾಗಿ ಕರಗುವಂಥ ಪದಾರ್ಥಗಳಿಂದ ಮಾಡಿದ ಮೂರ್ತಿಯನ್ನು ಆರಿಸಿಕೊಳ್ಳಿ. ತೀರಾ ಎತ್ತರ ಹಾಗೂ ಗಾತ್ರದಿಂದ ದೊಡ್ಡದಾದ ಗಣೇಶವನ್ನು ತರಬೇಕು ಎಂಬುದು ಕೆಲವರ ಅಭೀಷ್ಟ ಆಗಿರುತ್ತದೆ. ಅಂಥ ಮೂರ್ತಿಗಳನ್ನು ಬಹಳ ಎಚ್ಚರಿಕೆಯಿಂದ ತರಬೇಕಾಗುತ್ತದೆ. ಅವು ಭಂಗವಾಗುವ ಅಥವಾ ಮೂರ್ತಿಯನ್ನು ಮುಳುಗಿಸುವ ವೇಳೆ ತೊಂದರೆ ಆಗುವ ಸನ್ನಿವೇಶಗಳು ಹೆಚ್ಚು. ಆದ್ದರಿಂದ ಚಿಕ್ಕದಾದ- ಮುದ್ದಾದ ಹಾಗೂ ಸಹಜವಾದ ಗಣಪತಿ- ಗೌರಿ ಮೂರ್ತಿಯನ್ನು ಆರಿಸಿಕೊಳ್ಳಿ.

ಅಕ್ಕಿಯನ್ನು ತೆಗೆದುಕೊಂಡು ಹೋಗಬೇಕು

ಮೂರ್ತಿಗಳನ್ನು ತರುವಾಗ ಪುರುಷರು ಪಂಚೆಯನ್ನು ಹಾಗೂ ಅದರ ಮೇಲೆ ಮೇಲುವಸ್ತ್ರವನ್ನು ಧರಿಸಿ, ಬರಿಗಾಲಿನಲ್ಲಿ ತೆರಳಿ. ಜೊತೆಗೆ ಗಂಟೆಯನ್ನು ತೆಗೆದುಕೊಂಡು ಹೋಗಿರಬೇಕು. ಆರಂಭದಲ್ಲಿ ಹೇಳಿದಂತೆ ಸ್ವಲ್ಪ ಪ್ರಮಾಣದ ಅಕ್ಕಿ ಪೊಟ್ಟಣದಲ್ಲಿಯಾದರೂ ಕಟ್ಟಿಕೊಂಡು ಹೋಗಿರಿ. ಗಣಪತಿ ಗೌರಿ ಮೂರ್ತಿಯನ್ನು ನಿಮ್ಮ ಕಡೆಗೆ ಮುಖ ಹಾಗೂ ಎದುರಿಗೆ ವಿಗ್ರಹದ ಬೆನ್ನು ತೋರುವಂತೆ ಇಟ್ಟುಕೊಳ್ಳಬೇಕು. ಆ ಮೂರ್ತಿಗಳ ಮೇಲೆ ವಸ್ತ್ರವನ್ನು ಹೊದಿಸಬೇಕು. ದಾರಿಯುದ್ದಕ್ಕೂ ಗಂಟಾ ನಾದವನ್ನು ಮಾಡುತ್ತಾ ಬರಬೇಕು. ಮನೆಯ ಸಮೀಪದಲ್ಲಿ ಮಳಿಗೆ ಇದ್ದಲ್ಲಿ ದಾರಿಯುದ್ದಕ್ಕೂ ಮಾಡುತ್ತಾ ಬನ್ನಿ. ಇಲ್ಲದಿದ್ದಲ್ಲಿ ಆ ಮೂರ್ತಿಯನ್ನು ಎತ್ತಿಕೊಂಡು ಹಿಡಿದುಕೊಳ್ಳುವಾಗ ಹಾಗೂ ಮನೆಯ ಹೊಸ್ತಿಲ ಬಳಿ ನಿಂತಾಗ ಗಂಟಾ ನಾದವನ್ನು ಮಾಡಿ. ಮನೆಯ ಹೊಸ್ತಿಲ ಬಳಿ ಬಂದ ಮೇಲೆ ಆ ವಿಗ್ರಹದ ಮುಖವನ್ನು ಮನೆಯ ಕಡೆಗೆ ತಿರುಗಿಸುವಂತೆ ಮಾಡಿಟ್ಟುಕೊಳ್ಳಿ. ಮನೆಯಲ್ಲಿ ಇರುವವರು ಆ ವಿಗ್ರಹಗಳಿಗೆ ಆರತಿಯನ್ನು ಮಾಡಿ, ಒಳಗೆ ಬರಮಾಡಿಕೊಳ್ಳಬೇಕು. ಇನ್ನು ಬರುವ ದಾರಿಯ ಉದ್ದಕ್ಕೂ ಮನಸ್ಸಿನಲ್ಲಿಯೇ ಗೌರಿ- ಗಣಪತಿ ಸ್ಮರಣೆಯನ್ನು ಮಾಡುತ್ತಾ ಬನ್ನಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *