ಖರ್ಗೆ ಕುಟುಂಬಕ್ಕೆ ಸರ್ಕಾರಿ ಭೂಮಿಯ ಅಗತ್ಯವೇನಿತ್ತು?: ಶೆಟ್ಟರ್ ಅನುಮಾನ

ಖರ್ಗೆ ಕುಟುಂಬಕ್ಕೆ ಸರ್ಕಾರಿ ಭೂಮಿಯ ಅಗತ್ಯವೇನಿತ್ತು?: ಶೆಟ್ಟರ್ ಅನುಮಾನ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕುಟುಂಬಕ್ಕೆ ಸೇರಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ವಿವಾದದ ನಿವೇಶನಗಳನ್ನು ಕೆಐಎಡಿಬಿಗೆ ವಾಪಸ್ ನೀಡಲು ಮುಂದಾಗಿದೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಹಲವು ಅನುಮಾನಗಳು ಕೂಡ ಎದ್ದಿವೆ. ಸಿದ್ದರಾಮಯ್ಯ ಅವರ ಮುಡಾ ಕೇಸ್ ಬಳಿಕ ಖರ್ಗೆ ಕುಟುಂಬ ಎಚ್ಚೆತ್ತುಕೊಂಡಿದೆ ಎಂದೂ ಹೇಳಲಾಗುತ್ತಿದೆ.

ಮುಡಾ ಬದಲಿ ನಿವೇಶನ ಹಂಚಿಕೆ ಕೇಸ್ಗೂ ಕೋರ್ಟ್ಮೆಟ್ಟಿಲೇರಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸೈಟುಗಳನ್ನು ವಾಪಸ್ ನೀಡುವುದಾಗಿ ಹೇಳಿದರು. ಈಗ ಖರ್ಗೆ ಕುಟುಂಬ ಕೂಡ ತಮ್ಮ ಟ್ರಸ್ಟ್ ಪಡೆದಿದ್ದ ನಿವೇಶನಗಳನ್ನು ವಾಪಸ್ ನೀಡಲು ಮುಂದಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್, ಮಲ್ಲಿಕಾರ್ಜುನ್ ಖರ್ಗೆ ಅವರ ಸಿದ್ಧಾರ್ಥ ಟ್ರಸ್ಟ್ ವಿರುದ್ಧ ಆರೋಪಗಳು ಕೇಳಿಬಂದಾಗ ಅವರು ಭೂಮಿಯನ್ನು ಕೆಐಎಡಿಬಿಗೆ ವಾಪಸ್ ನೀಡಲು ಮುಂದಾಗಿದ್ದಾರೆ. ಇದ್ದಕ್ಕಿದ್ದಂತೆ ಅವರು ನಿವೇಶಗಳನ್ನು ಏಕೆ ಹಿಂತಿರುಗಿಸುತ್ತಿದ್ದಾರೆ ಎಂದು ಅವರೇ ಉತ್ತರಿಸಬೇಕು ಎಂದಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರಂತಹ ನಾಯಕರು ಸರ್ಕಾರಿ ಭೂಮಿಯನ್ನು ಪಡೆಯಲು ಏಕೆ ಬಯಸುತ್ತಾರೆ? ಎಂದು ಪ್ರಶ್ನಿಸಿರುವ ಶೆಟ್ಟರ್, ಈ ವಿವಾದದ ವಿಚಾರಣೆಯು ಅವರ ವಿರುದ್ಧ ಸಾರ್ವಜನಿಕ ಚರ್ಚೆಗೆ ಬಂದ ಹಿನ್ನೆಲೆ ಸೈಟ್ ಹಿಂದಿರುಗಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಏನಿದರ ಹಿನ್ನೆಲೆ?: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಸ್ಥರು ಟ್ರಸ್ಟಿಗಳಾಗಿರುವ ಸಿದ್ದಾರ್ಥ್ ವಿಹಾರ ಟ್ರಸ್ಟ್ ಈ ಹಿಂದೆ ಪಡೆದುಕೊಂಡಿದ್ದ ಐದು ಎಕರೆ ವಿಸ್ತೀರ್ಣದ ಸಿಎ ನಿವೇಶನವನ್ನು ಹಿಂತಿರುಗಿಸಲು ಮುಂದಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಮಾಹಿತಿ ನೀಡಿದ್ದರು.

ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ಕೆಐಎಡಿಬಿ ವತಿಯಿಂದ ಸಿಎ ಸೈಟ್ಗಳನ್ನು ನೀಡಲಾಗಿತ್ತು. ಇದನ್ನು ಅಕ್ರಮವಾಗಿ ನೀಡಲಾಗಿದೆ ಎಂಬ ಆರೋಪ ಕೂಡ ಬಂದಿತ್ತು. ಈ ವಿಚಾರ ವಿವಾದಕ್ಕೆ ಸಿಲುಕಿ, ರಾಜ್ಯಪಾಲರವರೆಗೆ ತಲುಪಿತ್ತು.

ಇದರ ಬೆನ್ನಲ್ಲೇ ಸೈಟ್ಗಳನ್ನು ವಾಪಸ್ ನೀಡುವ ಖರ್ಗೆ ಕುಟುಂಬದ ನಿರ್ಧಾರದ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಕೆಐಎಡಿಬಿ ಹಂಚಿಕೆ ಮಾಡಿದ್ದ ಭೂಮಿಯನ್ನು ವಾಪಸ್ ನೀಡಲು ನಿರ್ಧರಿಸಿದ್ದೇವೆ. ನಮ್ಮ ಟ್ರಸ್ಟ್ಗೆ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎನ್ನುವ ಆರೋಪ ಇತ್ತು. ಈ ಬಗ್ಗೆ ಟ್ರಸ್ಟ್ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಿಎ ಸೈಟ್ ಪಡೆಯುವ ಬಗ್ಗೆ ಸಹೋದರ ರಾಹುಲ್ ಖರ್ಗೆ ನಿರ್ಧರಿಸಿದ್ದರು. ಈಗ ಅವರೇ ಈ ಸೈಟ್ಗಳನ್ನು ವಾಪಸ್ ಕೊಡಲು ನಿರ್ಧರಿಸಿದ್ದಾರೆ. ಬಹುತೇಕರಿಗೆ ನಮ್ಮ ಸಹೋದರ ರಾಹುಲ್ ಖರ್ಗೆ ಯಾರೂ ಅನ್ನೋದೆ ಗೊತ್ತಿಲ್ಲ. ಈ ವಿವಾದ ರಾಜಕೀಯ ಆರೋಪ ಮಾತ್ರವಷ್ಟೇ, ಇದರಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ರಾಹುಲ್ ಅವರಿಗೆ ರಾಜಕಾರಣವೂ ಅಷ್ಟಾಗಿ ಗೊತ್ತಿಲ್ಲ ಎಂದು ಖರ್ಗೆ ಹೇಳಿದ್ದಾರೆ.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಮುಡಾ ಪ್ರಕರಣದಿಂದ ಖರ್ಗೆ ಕುಟುಂಬ ಎಚ್ಚೆತ್ತುಕೊಂಡಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *