‘ಅಪಘಾತ ನಡೆದಾಗ ವಾಹನಕ್ಕೆ ಪರವಾನಗಿ ಇಲ್ಲದಿದ್ದರೂ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು

'ಅಪಘಾತ ನಡೆದಾಗ ವಾಹನಕ್ಕೆ ಪರವಾನಗಿ ಇಲ್ಲದಿದ್ದರೂ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು

ಬೆಂಗಳೂರು: ಅಪಘಾತ ನಡೆದ ಸಂದರ್ಭದಲ್ಲಿ ವಾಹನಕ್ಕೆ ಪರವಾನಗಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ವಿಮಾ ಕಂಪನಿ ಘಟನೆಯಿಂದ ನೊಂದವರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿತು. ಅಲ್ಲದೆ, ಪರಿಹಾರದ ಮೊತ್ತವನ್ನು ವಾಹನ ಮಾಲೀಕರಿಂದ ವಿಮಾ ಕಂಪನಿ ವಸೂಲಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಅಪಘಾತಕ್ಕೊಳಗಾದ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ಪರಿಹಾರಕ್ಕೆ ಸೂಚಿಸಿದ್ದ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಶ್ರೀರಾಮ ಜನರಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರು ಈ ಆದೇಶ ಪ್ರಕಟಿಸಿದರು.

ವಾಹನ ಮಾಲೀಕರು ತನ್ನ ವಾಹನವನ್ನು ರಸ್ತೆಗಿಳಿಸುವ ವೇಳೆ ಪರವಾನಗಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿಲ್ಲ. ಇದು ವಾಹನ ಮಾಲೀಕರ ಮೂಲಭೂತ ಉಲ್ಲಂಘನೆ. ಈ ಪ್ರಕ್ರಿಯೆಯಲ್ಲಿ ವಾಹನ ಮಾಲೀಕರ ತಪ್ಪೂ ಇದೆ. ಹೀಗಾಗಿ ವಿಮಾ ಕಂಪನಿಗಳ ಸಂಪೂರ್ಣ ಜವಾಬ್ದಾರಿಯಿಂದ ವಿನಾಯಿತಿ ನೀಡಬೇಕು. ಮಾಲೀಕರೇ ಪರಿಹಾರ ಪಾವತಿ ಮಾಡಬೇಕು ಎಂಬ ವಿಮಾ ಕಂಪನಿಯ ವಾದವನ್ನು ಕೋರ್ಟ್ ತಿರಸ್ಕರಿಸಿತು.

ಅಲ್ಲದೆ, ಮೋಟಾರು ವಾಹನ ಕಾಯಿದೆ ಮತ್ತು ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ಅಗತ್ಯ ಪರವಾನಗಿ ಇಲ್ಲದಿರುವುದು, ಪ್ರಮಾಣ ಪತ್ರ ಮತ್ತು ನೋಂದಣಿ ನವೀಕರಣ ಆರೋಪ ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳ ಅಡಿಯಲ್ಲಿ ವಾಹನದ ಚಾಲಕನ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನ ಪೂರ್ಣಪೀಠ ಪ್ರಕರಣವನ್ನು ಪರಿಗಣಿಸಿದೆ. ಸ್ವರಣ್ ಸಿಂಗ್ ಮತ್ತು ಯಲ್ಲವ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವಂತೆ ಇದೊಂದು ಮೂಲಭೂತವಾದ ಉಲ್ಲಂಘನೆಯಾಗಿದ್ದರೂ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ವಿಮಾ ಕಂಪನಿಯ ವಾದ ಪರಿಗಣಿಸಲಾಗುವುದಿಲ್ಲ. ಅಲ್ಲದೆ, ವಿಮಾ ಕಂಪನಿಯು ಪರಿಹಾರವನ್ನು ಪಾವತಿ ಮಾಡಬೇಕು ಮತ್ತು ವಾಹನ ಮಾಲೀಕರಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಪೀಠ ಹೇಳಿತು.

ಹೀಗಾಗಿ ವಾಹನ ಮಾಲೀಕರು ಪರಿಹಾರ ಪಾವತಿ ಮಾಡಬೇಕು. ಹೀಗಾಗಿ ಮುಂದಿನ 8 ವಾರಗಳಲ್ಲಿ ಪರಿಹಾರ ಮೊತ್ತವನ್ನು ಸಂತ್ರಸ್ತರ ಖಾತೆಗೆ ಪಾವತಿಸಬೇಕು. ಬಳಿಕ ವಾಹನದ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿತು. ಜೊತೆಗೆ, 2013ರ ಜೂನ್ 17ರಂದು ಘಟನೆ ನಡೆದಿದೆ. ಘಟನೆಯಿಂದಾಗಿ ಬೈಸಿಕಲ್ನಲ್ಲಿ ಬರುತ್ತಿದ್ದ ವ್ಯಕ್ತಿ ಪ್ರಜ್ಞಾಹೀನನಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ಚಿಕಿತ್ಸೆ ಪಡೆದು ಸುಮಾರು ಒಂದು ತಿಂಗಳ ಬಳಿಕ ಮೃತಪಟ್ಟಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ ಘಟನೆ ನಡೆದ ದಿನದಿಂದಲೂ ಸಾಯುವವರೆಗೂ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *