ಚನ್ನಪಟ್ಟಣ : ನಾವು ಯೋಗೇಶ್ವರ್ ಅವರಿಗೆ ಕರೆದು ಟಿಕೆಟ್ ಕೊಟ್ಟಿದ್ದೇವೆ. ಕಾರಣ, ಯೋಗೇಶ್ವರ್ ಅವರು ಕಾಂಗ್ರೆಸ್ ಸರ್ಕಾರದ ಜತೆ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದಾರೆ. ನಾವು ಮನೆಗೆ ಉಚಿತ ವಿದ್ಯುತ್ ನೀಡಿದ್ದೇವೆ. ಯೋಗೇಶ್ವರ್ ಕೇರೆಗಳಿಗೆ ನೀರು ತುಂಬಿಸಿದ್ದಾರೆ.
ನಾನು ಈ ಭಾಗದ ರೈತರಿಗೆ ವಿದ್ಯುತ್ ಟಿಸಿಗಳನ್ನು ಹಾಕಿಸಿದ್ದೇನೆ. ಇಂತಹ ಒಂದು ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರಾ? ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ನಾನು ಕುಮಾರಸ್ವಾಮಿ ಅವರ ಮಗನ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಪಾಪ ಕಂದ. ಅವರು ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಎಂದರೂ ಹಾಕುತ್ತಾನೆ, ನಗು ಎಂದರೂ ನಗುತ್ತಾನೆ. ಆತನನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆತ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದಾರೆ. ಅವರು ಒತ್ತಕ್ಕೆ ಸ್ಪರ್ಧಿಸಿದ್ದಾರೆಯೇ ಹೊರತು, ಜನರ ಸೇವೆಗಾಗಿ ಅಲ್ಲ. ನಿಮ್ಮ ಕಷ್ಟ ಸುಖಕ್ಕೆ ಭಾಗಿಯಾಗಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.
ನನ್ನ ಪ್ರಶ್ನೆ ಇರುವುದು ಕುಮಾರಣ್ಣನಿಗೆ. ಇಲ್ಲಿ ಮತ ಕೇಳಬೇಕು ಎಂದರೆ ಧೈರ್ಯಬೇಕು. ನಾವು ನಿಮ್ಮ ಕ್ಷೇತ್ರದ ಜನರ ಋಣ ತೀರಿಸುತ್ತೇವೆ ಎಂದು ನಾನು ಎದೆ ತಟ್ಟಿಕೊಂಡು ಹೇಳಬಲ್ಲೆ. ಈಗಾಗಲೇ ಸಾವಿರಾರು ಜನರಿಗೆ ನಿವೇಶನ ಹಂಚಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಯೋಗೇಶ್ವರ್ ರೆಡಿಮೇಡ್ ಗಂಡು. ಅವರಿಗೆ ನಿಮ್ಮ ಕಷ್ಟ, ಸುಖ, ನೋವು ಗೊತ್ತಿದೆ. ನಿಮ್ಮ ಹಳ್ಳಿಗಳು ಗೊತ್ತಿದೆ. ಅವರಿಗೆ ಬೆಂಬಲವಾಗಿ ಸರ್ಕಾರವಿದೆ. ಅವರ ಬೆನ್ನಿಗೆ ಈ ಡಿ.ಕೆ. ಶಿವಕುಮಾರ್ ಇದ್ದಾನೆ. ನಾನು ಎಂದಾದರೂ ಕೊಟ್ಟ ಮಾತು ತಪ್ಪಿದ್ದೀನಾ? ಎಂದು ಡಿ ಕೆ ಶಿವಕುಮಾರ್ ಹೇಳಿದರು.
ನನಗೆ ಮಹಿಳೆಯರ ಮೇಲೆ ವಿಶೇಷ ನಂಬಿಕೆ ಇದೆ. ನಮ್ಮ ಎಲ್ಲ ಕಾರ್ಯಕ್ರಮಗಳು ಮಹಿಳೆಯರ ಮೇಲೆ ಕೇಂದ್ರೀಕೃತವಾಗಿದೆ. ಇಲ್ಲಿರುವ ಪ್ರತಿ ಮಹಿಳೆಯರು ತಮ್ಮ ಕುಟುಂಬದ ನಾಲ್ಕು ಮತಗಳನ್ನು ಕಾಂಗ್ರೆಸ್ ಹಾಕಿಸಬೇಕು. ಎದುರಾಳಿ ಪಕ್ಷದವರು ಏನನ್ನೇ ಸುರಿಸಲಿ, ಯಾವುದೇ ಬಣ್ಣ ಹಾಕಿಕೊಳ್ಳಲಿ, ಯಾವುದೇ ನಾಟಕವಾಡಲಿ. ನಮಗೆ ನಿಮ್ಮ ಮೇಲೆ ನಂಬಿಕೆ ಇದೆ. ಚನ್ನಪಟ್ಟಣದಲ್ಲಿ ಅಭಿವೃದ್ಧಿ ಪರ್ವ ಮಾಡಿಯೇ ಮಾಡುತ್ತೇವೆ. ಯೋಗೇಶ್ವರ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಿ ನಿಮ್ಮ ಸೇವೆಗೆ ನಮ್ಮನ್ನು ಉಪಯೋಗಿಸಿಕೊಳ್ಳಿ. ಬೇರೆ ಪಕ್ಷದ ಕಾರ್ಯಕರ್ತರು ದಳದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಕುಮಾರಣ್ಣ ದಳವನ್ನು ಕೈಬಿಟ್ಟಾಯ್ತು. ಹೀಗಾಗಿ ಆ ಪಕ್ಷದ ಕಾರ್ಯಕರ್ತರು ನಮ್ಮ ಜತೆ ಕೈಜೋಡಿಸಿ ಎಂದರು.
ವಿರೂಪಾಕ್ಷಿಪುರ ಹೊಬಳಿಯ ಮಹಾಜನತೆ ನನ್ನನ್ನು ಕಷ್ಟ ಕಾಲದಲ್ಲಿ ಗೆಲ್ಲಿಸಿ ಆಶೀರ್ವಾದ ಮಾಡಿ ಇಷ್ಟು ದೊಡ್ಡ ಮರವಾಗಿ ಬೆಳೆಸಿದ್ದೀರಿ. ನಿಮಗೆ ಒಂದು ಕೋಟಿ ನಮನಗಳು. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡದಿದ್ದಾಗ ನನ್ನ ಬೆನ್ನಿಗೆ ನಿಂತ ಅಣ್ಣಯ್ಯಪ್ಪ, ಸಂಜೀವಯ್ಯ ಹಾಗೂ ಅವರ ಪುತ್ರ ಮಹದೇವಪ್ಪ, ಶಿವಪ್ಪ, ಚಿಕ್ಕರಾಜು, ಪದ್ಮರಾಯ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಶಿಷ್ಯ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ.
ಕಷ್ಟ ಕಾಲದಲ್ಲಿ ನೀವು ನನ್ನ ಜತೆ ನಿಂತಿದ್ದೀರಿ. ನಾನು 1985ರಲ್ಲಿ ದೇವೇಗೌಡರ ವಿರುದ್ಧ ಸೋತಿದ್ದೆ. ನಂತರ ಸತತವಾಗಿ ನಾಲ್ಕು ಬಾರಿ ನನನ್ನು ಗೆಲ್ಲಿಸಿದಿರಿ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ ಕನಕಪುರ ಕ್ಷೇತ್ರವಾಯಿತು. ಈ ವಿರೂಪಾಕ್ಷಪುರ ಹೊಬಳಿ ಚನ್ನಪಟ್ಟಣ ಕ್ಷೇತ್ರಕ್ಕೆ ಸೇರಿತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಯೋಗೇಶ್ವರ್ ಅವರಿಗೆ ಹೆಚ್ಚು ಮತ ನೀಡಿ ಗೆಲ್ಲಿಸಿದ್ದೀರಿ.
ಮನುಷ್ಯನಿಗೆ ನಂಬಿಕೆ ಮುಖ್ಯ. ನಿಮ್ಮ ಮೇಲೆ ವಿಶ್ವಾಸವಿಟ್ಟು ನಾವು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಯೋಗೇಶ್ವರ್ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ನಾವು ಇಲ್ಲಿಗೆ ಬರುವಾಗ ಬಿ.ವಿ ಹಳ್ಳಿ ಕೆರೆ ತೋರಿಸಿ, ನೀರು ತುಂಬಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಆಡಳಿತ ಪಕ್ಷದಲ್ಲಿದ್ದು, ನನ್ನ ಮೇಲೆ ಹಾಗೂ ಯೋಗೇಶ್ವರ್ ಅವರ ಮೇಲೆ ಜವಾಬ್ದಾರಿ ಇದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿ ನಾವು ನಿಮ್ಮ ಮುಂದೆ ಬಂದಿದ್ದೇವೆ. ನಾನು ಈ ಭಾಗದ ಶಾಸಕನಾಗಿದ್ದಾಗ ಪ್ರತಿ ವರ್ಷ ಅಧಿಕಾರಿಗಳನ್ನು ಕರೆದುಕೊಂಡು ನಿಮ್ಮ ಊರಿಗೆ ಬರುತ್ತಿದ್ದೆ. ಇಂತಹ ಕೆಲಸವನ್ನು ಕುಮಾರಸ್ವಾಮಿ ಎಂದಾದರೂ ಮಾಡಿದ್ದಾರಾ? ಇಲ್ಲಿ ಕೇವಲ ಯೋಗೇಶ್ವರ್ ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೂ ಅಭ್ಯರ್ಥಿಯೇ ಎಂದು ಹೇಳಿದರು.