ಹೆಚ್ಚು ಜನ ಸೇರ್ತಾರಾ..? : SOP ಕಡ್ಡಾಯ || ಸರ್ಕಾರಕ್ಕೆ ಹೈಕೋರ್ಟ್ ಸೂಚನೆ..!

ನೇಮಕಾತಿ ಮೀಸಲಾತಿ ಶೇ.56ಕ್ಕೆ ಹೆಚ್ಚಿಸಿದ್ದ ಸರ್ಕಾರ : ಆದೇಶ ರದ್ದುಗೊಳಿಸಿದ KAT

ಬೆಂಗಳೂರುನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯದಂತೆ ತಡೆಯಲು ಪ್ರಮಾಣಿಕೃತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಘಟನೆಯ ಕುರಿತಂತೆ ಮಾಧ್ಯಮಗಳ ಸುದ್ದಿಗಳನ್ನು ಆಧರಿಸಿ, ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಈ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ಎರಡು ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇವೆ, ಒಂದು ಸರ್ಕಾರ ಏನಾದರೂ ಕ್ರಮ ಕೈಗೊಳ್ಳುತ್ತಿದೆಯೇ ಎಂಬುದು, ಎರಡನೆಯದು ಭವಿಷ್ಯದಲ್ಲಿಇಂತಹ ಘಟನೆಗಳು ಆಗದಂತೆ ತಡೆಯಲು ಸರ್ಕಾರ ಏನಾದರೂ ಕ್ರಮ ಅಥವಾ ಶಿಷ್ಟಾಚಾರ ಇದೆಯೇ ಎಂಬುದನ್ನು ತಿಳಿಸಬೇಕು ಎಂದು ಪೀಠ ಮೌಖಿಕವಾಗಿ ಸೂಚಿಸಿತು.

ಇದಕ್ಕೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಶೀಘ್ರವೇ ಎಸ್ಒಪಿಯನ್ನು ಪೀಠಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅಡ್ವೋಕೆಟ್ ಜನರಲ್, ”ಕ್ರೀಡಾಂಗಣದ ಸಾಮರ್ಥ್ಯವಿದ್ದಿದ್ದು 35 ಸಾವಿರ ಮಾತ್ರ. ಆದರೆ 3 ಲಕ್ಷ ಜನರು ಜಮಾಯಿಸಿದ್ದರಿಂದ ಘಟನೆ ಸಂಭವಿಸಿದೆ. ಉಚಿತ ಪ್ರವೇಶ ನೀಡಲಾಗಿತ್ತು, ದೊಡ್ಡ ಸಂಖ್ಯೆಯಲ್ಲಿ ಜನ ಎಲ್ಲರೂ ಒಳಗೆ ನುಗ್ಗಲು ಯತ್ನಿಸಿದಾಗ ಘಟನೆ ಜರುಗಿದೆ. ಇಂತಹ ಘಟನೆಗಳನ್ನು ತಡೆಯಲು ಎಸ್ಒಪಿ ರೂಪಿಸಲಾಗುತ್ತಿದೆ, ಅದನ್ನು ಎಲ್ಲರ ಸಲಹೆಗಳನ್ನು ಪಡೆಯಲು ಶೀಘ್ರವೇ ಹಂಚಿಕೆ ಮಾಡಲಾಗುವುದು” ಎಂದರು.

”ವಿಜಯೋತ್ಸವ ಆಚರಣೆಗೆ ಕರೆ ನೀಡಿದ್ದ ಡಿಎನ್ಎ ಸಂಸ್ಥೆ ಪರ ವಕೀಲರು, ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ನೇತೃತ್ವದ ಆಯೋಗ 15 ದಿನಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೂ, ಇನ್ನೂ ತಮಗೆ ವರದಿಯ ಪ್ರತಿ ನೀಡಿಲ್ಲ. ಪ್ರತಿದಿನ ಮಾಧ್ಯಮಗಳು ಸರ್ಕಾರದ ವರ್ಚಸ್ಸನ್ನು ಹಾಳು ಮಾಡುತ್ತಿವೆ. ಆಯೋಗದ ವರದಿಯನ್ನು ಪ್ರಶ್ನಿಸಿರುವ ಅರ್ಜಿ ಮತ್ತೊಂದು ನ್ಯಾಯಪೀಠದ ಮುಂದೆ ಬಾಕಿ ಇದೆ. ಈ ಅರ್ಜಿ ವಿಚಾರಣೆ ಬಾಕಿ ಇರುವುದರಿಂದ ಅದರ ವಿಚಾರಣೆಗೆ ಅಡ್ಡಿಯಾಗುತ್ತದೆಯೇ ಎನ್ನುವ ಬಗ್ಗೆ ನ್ಯಾಯಾಲಯವೇ ಸ್ಪಷ್ಟನೆ ನೀಡಬೇಕು” ಎಂದು ಅಡ್ವೊಕೇಟ್ ಜನರಲ್ ಕೋರಿದರು.

”ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲೆ ಎಸ್.ಸುಶೀಲಾ, ದೊಡ್ಡ ಪ್ರಮಾಣದಲ್ಲಿ ಜನಸಂದಣಿ ಇದ್ದಲ್ಲಿ ಅಂತಹ ಸಂದರ್ಭಗಳನ್ನು ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ 2014ರಲ್ಲಿಯೇ ಮಾರ್ಗಸೂಚಿ ಹೊರಡಿಸಿದ್ದು, ಅದು ಪ್ರಸ್ತುತ ಜಾರಿಯಲ್ಲಿದೆ. ರಾಜ್ಯ ಸರ್ಕಾರ ಆ ಮಾರ್ಗಸೂಚಿಗಳನ್ನು ಸುಧಾರಿಸಿ ಮತ್ತಷ್ಟು ಉತ್ತಮಗೊಳಿಸುವುದಾದರೆ ಒಳ್ಳೆಯದು. ನಮ್ಮ ಕಾಳಜಿ ಮುಂದೆ ಅಂತಹ ಘಟನೆಗಳು ನಡೆಯಬಾರದು ಎಂಬುದಾಗಿದೆ” ಎಂದು ಪೀಠಕ್ಕೆ ವಿವರಿಸಿದರು

Leave a Reply

Your email address will not be published. Required fields are marked *