ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಒಂದಿಲ್ಲ ಒಂದು ನಿಯಮ ಉಲ್ಲಂಘನೆ ಪ್ರಕರಣಗಳಿಂದ ಆಗಾಗ ಸುದ್ದಿ ಆಗುತ್ತಲೇ ಇದೆ. ಇತ್ತೀಚೆಗೆ ಮೆಟ್ರೋದಲ್ಲೇ ಪ್ರಯಾಣಿಕರೊಬ್ಬರು ತಂಬಾಕು ಉತ್ಪನ್ನ ಪಾನ್ ಮಸಾಲ ಅನ್ನು ಹಾಕಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಮಹಿಳಾ (ಯುವತಿ) ಪ್ರಯಾಣಿಕರೊಬ್ಬರು ಮೆಟ್ರೋ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಕಟ್ಟಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ ಈ ಮಹಿಳೆ ಮಾದವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಏಪ್ರಿಲ್ 26 ರಂದು ಘಟನೆ ನಡೆದಿದ್ದು, ಇಂದು 500 ರೂಪಾಯಿ ದಂಡಿ ಕಟ್ಟಿಸಿಕೊಳ್ಳಲಾಗಿದೆ. ಈ ಮಹಿಳೆಯು ಮೆಟ್ರೋದಲ್ಲಿ ಪ್ರಯಾಣಿಸುವಾಗ ಅವರು ಊಟ ಮಾಡಿದ್ದಾರೆ. ರೈಲಿನಲ್ಲಿ ಊಟ, ತಿಂಡಿ ತಿನಿಸು ತಿನ್ನುವುದು ನಿಷಿದ್ಧ. ಹೀಗೆ ಮಾಡಿದರೆ ನಿಯಮ ಉಲ್ಲಂಘಟನೆ ಆಗುತ್ತದೆ. ಈ ಮಹಿಳೆ ತಾನು ತಂದಿದ್ದ ಬಾಕ್ಸ್ನಿಂದ ಊಟ ಮಾಡುತ್ತಿದ್ದ ವಿಡಿಯೋ ಅನ್ನು ಸಹ ಪ್ರಯಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಎಂದಿನಂತೆ ಆ ಮಹಿಳೆ ಇಂದು ಸೋಮವಾರ ಬೆಳಿಗ್ಗೆ ನೈಸ್ ರಸ್ತೆ ಜಂಕ್ಷನ್ನಲ್ಲಿರುವ ಮಾದವರ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದ್ದಾರೆ. ಈ ವೇಳೆ ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಅವರಿಗೆ ದಂಡ ವಿಧಿಸಿದ್ದಾರೆ. ಬೆಂಗಳೂರು ಮೆಟ್ರೋ ನಿಯಮಗಳಲ್ಲಿ ವಿವರಿಸಿದಂತೆ ಮೆಟ್ರೋ ಆವರಣದೊಳಗೆ ಮತ್ತು ರೈಲುಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮ ಕಸ ಹಾಕುವುದನ್ನು ತಡೆಗಟ್ಟುವುದು, ನೈರ್ಮಲ್ಯವನ್ನು ಕಾಪಾಡುತ್ತದೆ. ಪ್ರಯಾಣಿಸುವ ಪ್ರತಿಯೊಬ್ಬರಿಗೂ ಆನಂದದಾಯಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು BMRCL ತಿಳಿಸಿದೆ.

ಎಲ್ಲಾ ಪ್ರಯಾಣಿಕರು ಈ ನಿಯಮಗಳನ್ನು ಪಾಲಿಸಲು ಮತ್ತು ಮೆಟ್ರೋ ವ್ಯವಸ್ಥೆಯ ಸ್ವಚ್ಛತೆಯನ್ನು ಎತ್ತಿಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಲು BMRCL ಪ್ರೋತ್ಸಾಹಿಸುತ್ತದೆ. ಬೆಂಗಳೂರು ಮೆಟ್ರೋ ಹಂಚಿಕೆಯ ಸ್ಥಳವಾಗಿದೆ ಮತ್ತು ಎಲ್ಲಾ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ನಮ್ಮ ಮೆಟ್ರೋ ಕರೆ ನೀಡಿದೆ. ಪ್ರಯಾಣಿಕರು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಪರಿಸರವನ್ನು ಕಾಪಾಡಿಕೊಳ್ಳಲು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಅವರು ಕೋರಿದ್ದಾರೆ.
ಈ ಕಠಿಣ ಕ್ರಮ ಜಾರಿಯಿಂದ ಎಲ್ಲಾ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಖಾತ್ರಿಪಡಿಸಿಕೊಳ್ಳುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ.