ಆಟೋ ಸೀಟ್ ಗಲಾಟೆ ದುರಂತ ಅಂತ್ಯ .!

ಆಟೋ ಸೀಟ್ ಗಲಾಟೆ ದುರಂತ ಅಂತ್ಯ .!

ಹಲ್ಲೆಗೊಳಗಾದ ಚಾಲಕ ಸಾ*: ಕ್ಷುಲ್ಲಕ ಕಾರಣಕ್ಕೆ ಭೀಕರ ಘಟನೆ

ಬೆಂಗಳೂರು: ಆಟೋ ಸೀಟ್​​ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ತೀವ್ರ ಹಲ್ಲೆಗೊಳಗಾಗಿದ್ದ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನ  ಪಾದರಾಯನಪುರದಲ್ಲಿ ನಡೆದಿದೆ. ಮೃತನನ್ನು ಪರಿಚಿತನಿಂದ ಹಲ್ಲೆಗೊಳಗಾಗಿದ್ದ ಮುಬಾರಕ್​​ (26) ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಬ್ರೇಜ್ (46) ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಮೇ 1ರಂದು ಮುಬಾರಕ್ ತನ್ನ ಆಟೋ ಸೀಟ್ ತೆಗೆದುಕೊಂಡಿದ್ದಾನೆ ಎಂದು ತಬ್ರೇಜ್ ಮೇಲೆ ಆರೋಪಿಸಿದ್ದ. ಇದೇ ವಿಚಾರವಾಗಿ ಬೆಳಗ್ಗೆ 10ಗಂಟೆ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ್ದ ಸ್ಥಳೀಯರು, ಇಬ್ಬರನ್ನೂ ಬೇರ್ಪಡಿಸಿದ್ದರು. ಹೀಗಿದ್ದರೂ ಮತ್ತೆ ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ತಬ್ರೇಜ್ ಮರದ ತುಂಡಿನಿಂದ ಮುಬಾರಕ್ ಮೇಲೆ ದಾಳಿ ನಡೆಸಿದ್ದ. ಭೀಕರ ದಾಳಿ ವೇಳೆ ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಪರಿಣಾಮ ಮುಬಾರಕ್ ಕುಸಿದು ಬಿದ್ದಿದ್ದ. ತಕ್ಷಣವೇ ಈತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮುಬಾರಕ್​​ ಕೋಮಾಗೆ ತಲುಪಿದ್ದು, ಚಿಕಿತ್ಸೆ ಫಲಿಸದೆ ಅಂತಿಮವಾಗಿ ಪ್ರಾಣಬಿಟ್ಟಿದ್ದಾನೆ.

ಹಲ್ಲೆಗೊಳಗಾಗಿ ಮೃತಪಟ್ಟಿರುವ ಮುಬಾರಕ್​​ಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ ಎನ್ನಲಾಗಿದೆ. ಇನ್ನಯ ಘಟನೆ ಸಂಬಂಧ ಜಗಜೀವನರಾಮನಗರ ಪೊಲೀಸರು ಮೊದಲು ಕೊಲೆ ಯತ್ನ ಪ್ರಕರಣ ದಾಖಲಿಸಿ ತಬ್ರೇಜ್‌ನ್ನು ಬಂಧಿಸಿದ್ದರು. ಇದೀಗ ಮುಬಾರಕ್ ಸಾವಿನ ಹಿನ್ನೆಲೆ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಿದ್ದಾರೆ. ಕ್ಷುಲ್ಕ ವಿಚಾರಕ್ಕೆ ಶುರುವಾದ ಜಗಳ ಓರ್ವನ ಸಾವಿನಲ್ಲಿ ಅಂತ್ಯವಾಗಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *