ಮಹಿಳಾ ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

ಮಹಿಳಾ ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಏಕಾಂಗಿ ಹೋರಾಟದ ನಡುವೆಯೂ ಕೂಡ ಆಸ್ಟ್ರೇಲಿಯಾದ ಬಿಗುವಿನ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ ತಂಡ 9 ರನ್ಗಳ ಸೋಲು ಕಂಡಿದೆ. ಇದರೊಂದಿಗೆ ಭಾರತದ ವನಿತೆಯರ ಸೆಮಿಫೈನಲ್ ಹಾದಿ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯ ಭಾರತ ತಂಡವು ಸೆಮಿಫೈನಲ್ ತಲುಪಲು ಮಹತ್ವಪೂರ್ಣವಾಗಿತ್ತು. ಆದರೆ ಗೆಲ್ಲುವಲ್ಲಿ ಹರ್ಮನ್ ಪಡೆ ವಿಫಲವಾಯಿತು. 152 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. 26 ರನ್ ಆಗುವಷ್ಟರಲ್ಲಿ 20 ರನ್ಗಳೊಂದಿಗೆ ವೇಗದ ಆಟವಾಡುತ್ತಿದ್ದ ಶಫಾಲಿ ವರ್ಮಾ ಔಟಾದರು. ಆ ಬಳಿಕ 6 ರನ್ ಗಳಿಸಿದ್ದ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೋಡ್ರಿಗಸ್ (16) ಕೂಡ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ತಂಡ 47 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು.

ಅಂತಿಮ ಓವರ್ನಲ್ಲಿ ಭಾರತಕ್ಕೆ 14 ರನ್ ಅಗತ್ಯವಿತ್ತು. ಆದರೆ, 4 ವಿಕೆಟ್ ಉರುಳಿದ್ದು ಸೋಲಿಗೆ ಕಾರಣವಾಯಿತು. ಸದರ್ಲ್ಯಾಂಡ್ ಎಸೆದ ಮೊದಲ ಬಾಲ್ನಲ್ಲಿ ಹರ್ಮನ್ ಒಂದು ರನ್ ಪಡೆದರು. ಬಳಿಕ ಎರಡನೇ ಎಸೆತದಲ್ಲಿ ಪೂಜಾ ವಸ್ತ್ರೇಕರ್(9) ಬೌಲ್ಡ್ ಆದರು. ಬಳಿಕ ಬಂದ ಅರುಂಧತಿ ರೆಡ್ಡಿ ಹರ್ಮನ್ಗೆ ಸ್ಟ್ರೈಕ್ ಬಿಟ್ಟುಕೊಡುವ ಭರದಲ್ಲಿ ರನೌಟ್ಗೆ ಬಲಿಯಾದರು. ಆ ಬಳಿಕ ಹರ್ಮನ್ಗೆ ಬ್ಯಾಟಿಂಗ್ ಸಿಕ್ಕರೂ ಕೂಡ ದೊಡ್ಡ ಹೊಡೆತ ಆಡುವಲ್ಲಿ ವಿಫಲರಾಗಿ ಕೇವಲ ಒಂದು ರನ್ ಗಳಿಸಿದರು. ಬಳಿಕ 2 ಬಾಲ್ಗೆ 12 ರನ್ ಅಗತ್ಯವಿತ್ತು. 5ನೇ ಎಸೆತದಲ್ಲಿ ಶ್ರೇಯಾಂಕ ಪಾಟೀಲ್ ರನೌಟ್ ಆಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತು. ಅಂತಿಮ ಬಾಲ್ಗೆ ರಾಧಾ ಯಾದವ್ ಕೂಡ ಎಲ್ಬಿ ಬಲೆಗೆ ಬಿದ್ದಿದ್ದರಿಂದ ಭಾರತ 9 ರನ್ಗಳ ಸೋಲು ಅನುಭವಿಸಿತು.

ಭಾರತ ತಂಡ ಸೆಮಿಫೈನಲ್ ತಲುಪಬೇಕಾದರೆ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನದ ನಡುವಿನ ಇಂದಿನ ಪಂದ್ಯದ ಫಲಿತಾಂಶ ಪ್ರಾಮುಖ್ಯತೆ ಪಡೆದಿದೆ. ಒಂದು ವೇಳೆ ನ್ಯೂಜಿಲೆಂಡ್ ಗೆಲುವು ಕಂಡರೆ, ಭಾರತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಯಾಕೆಂದರೆ ಭಾರತ (+0.322) ಹಾಗೂ ಕಿವೀಸ್ (+0.282) ಸದ್ಯ ತಲಾ 4 ಅಂಕ ಹೊಂದಿವೆ. ಇನ್ನೊಂದೆಡೆ, ಎರಡು ಅಂಕ ಹೊಂದಿರುವ ಪಾಕಿಸ್ತಾನಕ್ಕೂ ಕೂಡ ಸೆಮಿಫೈನಲ್ ಅವಕಾಶವಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ದೊಡ್ಡ ಅಂತರದ ಗೆಲುವು ದಾಖಲಿಸಬೇಕಿದೆ. ಒಂದು ವೇಳೆ ನ್ಯೂಜಿಲೆಂಡ್ ಸೋತು, ಪಾಕ್ ಅಲ್ಪ ಅಂತರದಲ್ಲಿ ಜಯ ಸಾಧಿಸಿದರೆ ರನ್ರೇಟ್ ಆಧಾರದ ಮೇಲೆ ಭಾರತ ತಂಡ ಸೆಮೀಸ್ ತಲುಪಲಿದೆ.

Leave a Reply

Your email address will not be published. Required fields are marked *