ಯತ್ನಾಳ್ ಹೇಳಿಕೆ ವೈಯಕ್ತಿಕವಾದುದು, ಪಕ್ಷ ಒಪ್ಪಲು ಸಾಧ್ಯವಿಲ್ಲ

ಯತ್ನಾಳ್ ಹೇಳಿಕೆ ವೈಯಕ್ತಿಕವಾದುದು, ಪಕ್ಷ ಒಪ್ಪಲು ಸಾಧ್ಯವಿಲ್ಲ

ಬೆಂಗಳೂರು: ಸರ್ಕಾರವನ್ನು ರಚಿಸುವುದು ಹಣದ ಆಧಾರದಲ್ಲಿ ಎಂಬ ನಂಬಿಕೆ ನಮ್ಮದಲ್ಲ. ಇಲ್ಲಿನ ತನಕ ನಾವು ಸರ್ಕಾರ ರಚಿಸಿದ್ದು ಶಾಸಕರ ಬೆಂಬಲದಿಂದಲೇ ವಿನಃ ಯಾವುದೇ ಹಣಕಾಸಿನ ಬೆಂಬಲದೊಂದಿಗೆ ಅಲ್ಲ. ಯತ್ನಾಳ್ ಹೇಳಿಕೆ ಕುರಿತು ವರದಿ ಪಡೆದು ಉತ್ತರ ನೀಡಲಿದ್ದೇವೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ಕುಮಾರ್ ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಪಕ್ಷ ಒಪ್ಪಲು ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು. ಆ ರೀತಿಯ ಹೇಳಿಕೆಯು ಅವರ ವೈಯಕ್ತಿಕವಾದುದು. ಇದನ್ನು ಬಿಜೆಪಿ ಒಪ್ಪಲು ಸಾಧ್ಯ. ಇದನ್ನು ಪಕ್ಷದ ವರಿಷ್ಠರು ಖಂಡಿತವಾಗಿ ಗಮನಿಸುತ್ತಾರೆ. ಯಾವ ಹಿನ್ನೆಲೆಯಲ್ಲಿ ಇದನ್ನು ಹೇಳಿದ್ದಾರೆ ಎಂಬ ವರದಿ ತರಿಸಿಕೊಂಡು ಮುಂದಿನ ದಿನಗಳಲ್ಲಿ ನಾವು ಅದಕ್ಕೆ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.

ಪದೇ ಪದೇ ಈ ರೀತಿ ಮಾಡುವುದು ಸರಿಯಲ್ಲ ಎಂಬ ಚಿಂತನೆ ಕಾರ್ಯಕರ್ತರು ಮತ್ತು ಪಕ್ಷದ ವಲಯದಲ್ಲಿದೆ. ಇವತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಉಳಿದ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಈ ರೀತಿಯ ಚಟುವಟಿಕೆಗಳು ಪಕ್ಷಕ್ಕೆ ಮುಜುಗರ ತರುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ನಮ್ಮದು ಎಂದು ತಿಳಿಸಿದರು.

ಈ ಸಂಬಂಧ ಕೇಂದ್ರದ ನಾಯಕರ ಜೊತೆ ಮಾತುಕತೆ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಇದೆಲ್ಲವನ್ನೂ ತಿಳಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಪಕ್ಷ ನಿಷ್ಠರು, ಪಕ್ಷ ವಿರೋಧಿಗಳು ಎಂದೇನಿಲ್ಲ. ಎಲ್ಲರೂ ಪಕ್ಷ ನಿಷ್ಠರೇ; ಪಕ್ಷಕ್ಕೆ ಮುಜುಗರ ಆಗುವಂಥ ಕ್ರಮವನ್ನು ಯಾರೂ ಮಾಡಬಾರದು. ಪಕ್ಷ ನಿಷ್ಠರು ಎಂದು ಮುಜುಗರ ಮಾಡುವುದನ್ನು, ಪ್ರತ್ಯೇಕ ಸಭೆ ಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ನಾವು ತಯಾರಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

Leave a Reply

Your email address will not be published. Required fields are marked *