ನೇತ್ರಾವತಿ ನದಿ : ಸ್ಕೂಟರ್, ​ಮೊಬೈಲ್​ ಬಿಟ್ಟು ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ || Missing man found dead.

Missing man found dead

ದಕ್ಷಿಣ ಕನ್ನಡ: ಕಡೇಶಿವಾಲಯ ಗ್ರಾಮದ ಯುವಕನೋರ್ವ ತನ್ನ ಸ್ಕೂಟರ್​ ಹಾಗೂ ಮೊಬೈಲನ್ನು ಬಂಟ್ವಾಳ ಪುಂಜಾಲಕಟ್ಟೆ ರಸ್ತೆಯ ಸಮೀಪ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಬಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ನಾಲ್ಕು ದಿನಗಳ ಬಳಿಕ ಶವ ನೇತ್ರಾವತಿ ನದಿಯಲ್ಲಿ ದೊರಕಿದೆ.

ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಜುಲೈ 27ರಂದು ಕಡೇಶಿವಾಲಯದ ಹೇಮಂತ್ ಆಚಾರ್ಯ (21) ನಾಪತ್ತೆಯಾಗಿದ್ದ. ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಜುಲೈ 28ರಂದು ನೇತ್ರಾವತಿ ನದಿ ಪಕ್ಕ ಅವರ ಸ್ಕೂಟರ್​ ಮತ್ತು ಅದರಲ್ಲಿ ಮೊಬೈಲ್ ಪತ್ತೆಯಾಗಿತ್ತು. ಹೀಗಾಗಿ, ನದಿಗೆ ಹಾರಿರಬಹುದು ಎಂಬ ಶಂಕೆಯಿಂದ ಹುಡುಕಾಟ ಅಂದೇ ಆರಂಭಗೊಂಡಿತ್ತು. ಜುಲೈ 31ರಂದು ಹೇಮಂತ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಮಂತ್​ ಆಚಾರ್ಯ ಅವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ, ಗ್ರಾಮಾಂತರ ಪೊಲೀಸರು ಜಂಟಿಯಾಗಿ ಅಗ್ನಿಶಾಮಕದಳ ಹಾಗೂ ಸ್ಥಳೀಯ ಈಜುಗಾರರ ಸಹಾಯದಿಂದ ಹುಡುಕಾಟ ಆರಂಭಿಸಿದ್ದರು. ಮೂರು ದಿನಗಳಾದರೂ ಸಿಗದ ಕಾರಣ, ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ತಂಡ ಹಾಗೂ ಎನ್​ಡಿಆರ್​ಎಫ್ ಗುರುವಾರ ಆಗಮಿಸಿದ ಮೇಲೆ ಶೋಧ ಕಾರ್ಯ ಮತ್ತಷ್ಟು ಬಿರುಸಾಯಿತು. ಜಕ್ರಿಬೆಟ್ಟು ಅಲ್ಲದೆ, ತುಂಬೆ ಸಹಿತ ನದಿಯ ಹರಿವಿನ ಭಾಗಗಳಲ್ಲೆಲ್ಲಾ ಹುಡುಕಾಟ ನಡೆಸಲಾಗಿತ್ತು.

ಈ ವೇಳೆ, ಮಾಧ್ಯಮದವರ ಜೊತೆ ಮಾತನಾಡಿದ ಈಶ್ವರ್ ಮಲ್ಪೆ, “ಹೇಮಂತ್ ಅವರ ವಾಹನ ಡ್ಯಾಮ್​ ಬಳಿ ಪತ್ತೆಯಾಗಿರುವುದರಿಂದ ನೀರಿಗೆ ಬಿದ್ದಿರುವ ಶಂಕೆಯಿಂದ ನದಿಯಲ್ಲಿ ಹುಡುಕಿದ್ದೇವೆ. ಯುವ ಪೀಳಿಗೆಯ ಆತ್ಮಹತ್ಯೆಯ ಕುರಿತು ಜಾಗೃತಿ ಅಗತ್ಯವಾಗಿದೆ. ಯಾರೂ ಕೂಡ ಸಾಯದೆ, ಬದುಕಿ ತೋರಿಸಬೇಕು” ಎಂದು ಹೇಳಿದ್ದರು.

Leave a Reply

Your email address will not be published. Required fields are marked *