ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟು ಹಾಕಿದ ಸಿನಿಮಾ ನಿರ್ಮಾಣ ಸಂಸ್ಥೆ ಪಿಆರ್ಕೆ ಪ್ರೊಡಕ್ಷನ್, ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಸದಭಿರುಚಿಯ ಸಿನಿಮಾಗಳ ಜೊತೆಗೆ ಟ್ಯಾಲೆಂಟ್ ಇರುವ ನಟ ಹಾಗೂ ನಿರ್ದೇಶಕರಿಗೆ ಅವಕಾಶ ಕೊಡುತ್ತಿದೆ. ಅಪ್ಪು ಅಗಲಿಕೆಯ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಈ ಸಂಸ್ಥೆ ಮುನ್ನಡೆಸುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪವರ್ ಹೌಸ್ನಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ವೊಂದು ಸಿಕ್ಕಿದೆ.
ಅದುವೇ ಯುವ ರಾಜ್ಕುಮಾರ್ ಎರಡನೇ ಸಿನಿಮಾ ಬಗ್ಗೆ ಹೊಸ ಅಪ್ಡೇಟ್. ಈಗಾಗಲೇ ‘ಯುವ’ ಸಿನಿಮಾದಿಂದ ಕನ್ನಡ ಬೆಳ್ಳಿತೆರೆ ಮೇಲೆ ಅಬ್ಬರಿಸಿರುವ ಯುವ ರಾಜ್ಕುಮಾರ್ ಮೊದಲ ಚಿತ್ರದಲ್ಲೇ ಬೊಂಬಾಟ್ ಆಕ್ಷನ್, ಪಂಚಿಂಗ್ ಡೈಲಾಗ್ಗಳಿಂದ ಅಭಿಮಾನಿಗಳ ಮನ ಗೆದ್ದಿದ್ದರು. ಇದೀಗ ಯುವ ರಾಜ್ ಕುಮಾರ್ ಎರಡನೇ ಸಿನಿಮಾವನ್ನು ಪಿಆರ್ಕೆ ಪ್ರೊಡಕ್ಷನ್ನಡಿ ಮಾಡಲು ಸಿದ್ಧತೆ ನಡೆಯತ್ತಿದೆ.
ಈ ವಿಚಾರವಾಗಿ ಯುವರಾಜ್ ಕುಮಾರ್ ಕುಟುಂಬದ ಆಪ್ತರೊಬ್ಬರು ಹೇಳುವಂತೆ, ‘ಯುವ ರಾಜ್ಕುಮಾರ್ ಎರಡನೇ ಚಿತ್ರವನ್ನು ಪಿಆರ್ಕೆ ಬ್ಯಾನರ್ನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೇ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಕಂಟೆಂಟ್ ಇರುವ ಕಥೆಯನ್ನು ಮಾಡಲಾಗುತ್ತಿದೆ. ಸಿನಿಮಾವನ್ನು ದೊಡ್ಡಮಟ್ಟದಲ್ಲಿ ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣದ ಜೊತೆಗೆ ವಿತರಣೆ ಮಾಡುತ್ತಿರುವ ಕೆಆರ್ಜಿ ಸ್ಟುಡಿಯೋ ಕೂಡ ಅಶ್ವಿನಿ ಪುನೀತ್ ರಾಜ್ಕುಮಾರ್ ಜೊತೆ ಕೈಜೋಡಿಸಿದ್ದಾರೆ’ ಅಂತಾ ತಿಳಿಸಿದ್ದಾರೆ.