ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಪದಗ್ರಹಣದ ಹಿನ್ನಲೆ ನಡೆದ ವಿಜಯೋತ್ಸವದ ಬಳಿಕ 20-25 ಮಂದಿಯ ತಂಡವೊಂದು ಇಬ್ಬರಿಗೆ ಭಾನುವಾರ ರಾತ್ರಿ ಚೂರಿ ಇರಿದ ಘಟನೆ ನಗರದ ಮುಡಿಪು ಸಮೀಪದ ಬೋಳಿಯಾರುನಲ್ಲಿ ನಡೆದಿದೆ.
ಇನ್ನೋಳಿ ನಿವಾಸಿಗಳಾದ ಹರೀಶ್ (41), ನಂದಕುಮಾರ್ (24 ವರ್ಷ) ಚೂರಿ ಇರಿತಕ್ಕೊಳಗಾದವರು. ಇನ್ನೋಳಿ ನಿವಾಸಿ ಕೃಷ್ಣ ಕುಮಾರ್ ಎಂಬವರು ಹಲ್ಲೆಗೊಳಗಾಗಿದ್ದಾರೆ.
ಭಾನುವಾರ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬೋಳಿಯಾರುನಲ್ಲಿ ವಿಜಯೋತ್ಸವ ನಡೆದಿತ್ತು. ಈ ವೇಳೆ ಮೂವರು ಬಿಜೆಪಿ ಕಾರ್ಯಕರ್ತರು ಬೋಳಿಯಾರು ಪ್ರಾರ್ಥನಾ ಮಂದಿರವೊಂದರ ಮುಂಭಾಗ ಘೋಷಣೆಗಳನ್ನು ಕೂಗಿದ್ದರು ಎನ್ನಲಾಗಿದೆ.
ವಿಜಯೋತ್ಸವ ಮುಂದೆ ಸಾಗಿದ ಬಳಿಕ ಆಕ್ರೋಶಿತ ಯುವಕರು ಕೆಲ ಬೈಕ್ಗಳಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದು ಜಗಳ ತೆಗೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡೂ ತಂಡಗಳ ನಡುವೆ ವಾಗ್ವಾದ ನಡೆದಿದೆ. ಅಲ್ಲಿ ಯುವಕರ ತಂಡ ಮೂವರನ್ನು ಥಳಿಸಿ, ಇಬ್ಬರಿಗೆ ಚೂರಿಯಿಂದ ಇರಿದಿದೆ. ಇವರಲ್ಲಿ ಒಬ್ಬರು ಅಪಾಯದಿಂದ ಪಾರಾಗಿದ್ದು, ಮತ್ತೊಬ್ಬರಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ