ಚಂದಾಪುರದಿಂದ ಪುದುಚೇರಿ ಪ್ರಯಾಣದ ವೇಳೆ ಪಂಜರ ಸಮೇತ ಗಿಳಿ ನಾಪತ್ತೆ; ತನಿಖೆ ಆರಂಭ
ಬೆಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಮುದ್ದಿನ ಸಾಕು ಗಿಳಿಯನ್ನು ಪಂಜರ ಸಮೇತ ಕಳ್ಳತನ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಂದಾಪುರದ VBHC ಅಪಾರ್ಟ್‌ಮೆಂಟ್ ನಿವಾಸಿಯಾದ 48 ವರ್ಷದ ಎಂ. ಲಿಜಿ ಎಂಬುವವರು ಈ ದೂರು ನೀಡಿದವರು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಲಿಜಿ ಅವರು, ಪುದುಚೆರಿಯಲ್ಲಿರುವ ತಮ್ಮ ಅಸ್ವಸ್ಥ ತಂದೆಯನ್ನು ನೋಡಲು ಆನೇಕಲ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಮನೆಯಲ್ಲಿ ಗಿಳಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಅವರು ಅದನ್ನು ಪಂಜರದಲ್ಲಿ ಇರಿಸಿಕೊಂಡು ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು.

ಬಸ್ ಹತ್ತಿದ ಬಳಿಕ ಲಿಜಿ ಅವರು ಗಿಳಿಯಿದ್ದ ಪಂಜರವನ್ನು ಚಾಲಕನ ಕ್ಯಾಬಿನ್ ಬಳಿ ಸುರಕ್ಷಿತವಾಗಿ ಇರಿಸಿದ್ದರು. ಆದರೆ ಆನೇಕಲ್ ಮತ್ತು ಅತ್ತಿಬೆಲೆ ಟೋಲ್ ಪ್ಲಾಜಾ ನಡುವೆ ಸಂಚರಿಸುವಾಗ ಯಾರೋ ಕಿಡಿಗೇಡಿಗಳು ಪಂಜರ ಸಮೇತ ಗಿಳಿಯನ್ನು ಕದ್ದು ಪರಾರಿಯಾಗಿದ್ದಾರೆ. ಅತ್ತಿಬೆಲೆ ಟೋಲ್ ಸಮೀಪ ಬಸ್ ಬಂದಾಗ ಗಿಳಿಯನ್ನು ನೋಡಲು ಹೋದ ಲಿಜಿ ಅವರಿಗೆ ಪಂಜರ ಕಾಣದಿದ್ದಾಗ ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಬಸ್ ಸಿಬ್ಬಂದಿಗೆ ಮಾಹಿತಿ ನೀಡಿದರೂ, ಬಸ್ ಪರಿಶೀಲಿಸಿದಾಗ ಗಿಳಿ ಪತ್ತೆಯಾಗಿಲ್ಲ.
ತಂದೆಯ ಅನಾರೋಗ್ಯದ ಕಾರಣ ಅವರು ಪ್ರಯಾಣ ಮುಂದುವರಿಸಬೇಕಿದ್ದರಿಂದ, ಬಸ್ ಸಿಬ್ಬಂದಿಯಿಂದ ಅತ್ತಿಬೆಲೆ ಪೊಲೀಸರ ಸಂಖ್ಯೆ ಪಡೆದು ವಾಟ್ಸಾಪ್ ಮೂಲಕ ದೂರು ದಾಖಲಿಸಿದ್ದಾರೆ. ಬಸ್‌ನಲ್ಲಿದ್ದ ಸಹ ಪ್ರಯಾಣಿಕರೆ ಗಿಳಿಯನ್ನು ಕದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅತ್ತಿಬೆಲೆ ಪೊಲೀಸರು ಬಸ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
For More Updates Join our WhatsApp Group :




