ಕಲ್ಲಕುರಿಚಿ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 33ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 20 ಜನರು ಅಸ್ವಸ್ಥರಾಗಿದ್ದು ಈ ಪೈಕಿ 7 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದಿನಗೂಲಿ ಕಾರ್ಮಿಕರು ಸೇರಿ 60ಕ್ಕೂ ಹೆಚ್ಚಿನ ಜನರು ಮಂಗಳವಾರ ರಾತ್ರಿ ಪ್ಯಾಕೆಟ್ನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ತಲುಪಿದ ನಂತರ ಮದ್ಯ ಸೇವಿಸಿದ ಹೆಚ್ಚಿನವರಲ್ಲಿ ತಲೆ ತಿರುಗುವಿಕೆ, ವಾಂತಿ, ಹೊಟ್ಟೆ ನೋವು ಮತ್ತು ಕಣ್ಣುಗಳಲ್ಲಿ ಉರಿಯುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ.
ಇದನ್ನು ಕಂಡ ಕುಟುಂಬಸ್ಥರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ 10 ಜನರು ಸಾವನ್ನಪ್ಪಿದ್ದಾರೆ. ಇದೇ ದಿನ ಅಂದರೇ ನಿನ್ನೆ ರಾತ್ರಿ ಮತ್ತೆ ಆರು ಜನರು ಅಸುನೀಗಿದ್ದಾರೆ. ಇಂದು ಬೆಳಗ್ಗೆ ಸಾವಿನ ಸಂಖ್ಯೆ 33ಕ್ಕೇ ಏರಿಕೆಯಾಗಿದೆ. 20 ಜನರಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ