ಬೆಳಗಾವಿ: ನೆಲದ ಮೇಲೆ ಯೋಗಾಸನ ಮಾಡುವುದು ಸಾಮಾನ್ಯ. ಆದರೆ, ನೀರಿನಲ್ಲಿ ಯೋಗದ ವಿವಿಧ ಭಂಗಿಗಳನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ಅದರಲ್ಲೂ ದಿವ್ಯಾಂಗರು, ಚಿಕ್ಕಮಕ್ಕಳ ಜಲಯೋಗ ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿತು.
ಕಳೆದ ದಿನ ವಿಶ್ವದ ಹಲವೆಡೆ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಪಿಎಂ ಮೋದಿ ಅವರಿಂದ ಹಿಡಿದು ಜನಸಾಮಾನ್ಯವರವರೆಗೂ ಹೆಚ್ಚಿನವರು ಯೋಗದ ಮಹತ್ವವನ್ನು ಒಪ್ಪಿಕೊಂಡು, ಇತರರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರು. ಅದರಂತೆ, ಬೆಳಗಾವಿಯಲ್ಲೂ ಯೋಗ ದಿನ ಆಚರಿಸಲಾಯಿತು.
ನೀರಿನಲ್ಲಿ ರಾಷ್ಟ್ರಧ್ವಜ ಹಿಡಿದು ಲೀಲಾಜಾಲವಾಗಿ ಈಜುತ್ತಿರುವ ಮಕ್ಕಳು, ಹಣೆ ಮೇಲೆ ಗ್ಲಾಸ್ ಇಟ್ಟುಕೊಂಡು ಈಜುತ್ತಿರುವುದು, ನೀರಿನಲ್ಲಿ ಯೋಗದ ವಿವಿಧ ಅಸನಗಳ ಪ್ರದರ್ಶನ, ನಿರ್ಭಯವಾಗಿ ಆಸನಗಳನ್ನು ಹಾಕಿ ಗಮನ ಸೆಳೆದ 6ರ ಪುಟ್ಟ ಮಗು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ. ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ನಡೆದ ಜಲಯೋಗದಲ್ಲಿ ಯೋಗಪಟುಗಳು ಗಮನ ಸೆಳೆದಿದ್ದಾರೆ.
6 ವರ್ಷದ ಪುಟ್ಟ ಬಾಲಕಿ ಜೇನು ಹೊಂಜಡಕಟ್ಟಿ ನೀರಿನಲ್ಲಿ ನಿರಾತಂಕವಾಗಿ ಯೋಗದ ಆಸನಗಳನ್ನು ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು. ಮೂರ್ತಿ ಸಣ್ಣದಾದ್ರೂ ಕೀರ್ತಿ ದೊಡ್ಡದು ಎಂಬಂತೆ, ನಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಮಗು ಸಾಬೀತುಪಡಿಸಿತು